-->

Tuesday, October 11, 2011

ಮೋದಿಯ ತಲೆನೋವು - ಮಾತ್ರೆ ನುಂಗುವ ಕನ್ನಡ ಪತ್ರಕರ್ತರು

2002ರ ಗುಜರಾತ್ ಹತ್ಯಾಕಾಂಡದ ಕುರಿತ ಕಹಿಸತ್ಯವನ್ನು ನ್ಯಾಯಾಲಯಕ್ಕೆ ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಎದುರು  ಹಾಕಿಕೊಂಡಿರುವ  ಸಂಜೀವ್ ಭಟ್ ಈಗ  ಸುದ್ದಿಯಲ್ಲಿದ್ದಾರೆ. ಸತ್ಯ ಹೇಳಿದ ತಪ್ಪಿಗೆ ಗುಜರಾತ ಸರಕಾರ ಮೊದಲು ಅವರನ್ನು ಪಿಳ್ಳೆ ನೆವ ಹೇಳಿ ಅಮಾನತು ಮಾಡಿತು. ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದೆ.

ರಾಜ್ಯದಲ್ಲಿ ಹಲವು ವರ್ಷ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪೊಲೀಸ್ ಅಧಿಕಾರಿ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೆ ಪೊಲೀಸ್ ಕಸ್ಟಡಿಯಲ್ಲಿ ಅವರನ್ನು ಅತ್ಯಂತ ಕೆಟ್ಟದಾಗಿ ನೋಡಿಕೊಳ್ಳಲಾಗಿದೆ ಹಾಗು ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ಪತ್ನಿ ಶ್ವೇತಾ ಭಟ್ ಕೇಂದ್ರ ಸರಕಾರಕ್ಕೆ ಎರಡೆರಡು ಬಾರಿ ಪತ್ರ ಬರೆದಿದ್ದಾರೆ. ಗುಜರಾತ್‌ನ ಹಿರಿಯಧಿಕಾರಿಗಳಿಗೆ ನೀಡಿದ ಮನವಿಯಿಂದ ಏನೂ ಪ್ರಯೋಜನವಾಗದ ಬಳಿಕ ಶ್ವೇತಾ ಕೇಂದ್ರದ ಮೊರೆ ಹೋಗಿದ್ದರು. ಈ ನಡುವೆ ಗುಜರಾತ್ ಸರಕಾರದೊಂದಿಗೆ ರಾಜಿ ಮಾಡಿಕೊಳ್ಳುವುದಾದರೆ ನಿಮ್ಮನ್ನು ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ಅಲ್ಲಿನ ನ್ಯಾಯಾಧೀಶರೇ ಸಂಜೀವ್‌ರಿಗೆ ಒಡ್ಡಿದ ಆಮಿಶವನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇದು ಸಿದ್ಧಾಂತದ ಹೋರಾಟವಾದ್ದರಿಂದ ನಾನು ಜೈಲಿನಲ್ಲೇ ಇರಲು ಸಿದ್ಧ ಎಂದು ಹೇಳುವ ಮೂಲಕ ಮೋದಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ತಮ್ಮ ಹಿರಿಯ ಸಹೋದ್ಯೋಗಿಯನ್ನು ಸರಕಾರ ನಡೆಸಿಕೊಂಡ ರೀತಿಯನ್ನು ನೋಡಿದ ಅಲ್ಲಿನ ಐಪಿಎಸ್ ಅಧಿಕಾರಿಗಳೆಲ್ಲ ಈಗ ಒಗ್ಗಟ್ಟಾಗಿದ್ದಾರೆ. ರವಿವಾರ ಸಭೆ ಸೇರಿದ ಗುಜರಾತ್‌ನ ಐಪಿಎಸ್ ಅಧಿಕಾರಿಗಳ ಸಂಘವು ಸಂಜೀವ್ ಭಟ್‌ರನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದೆ. ಸಂಜೀವ್ ಬಂಧನದ ಕುರಿತು ತಮ್ಮ ತಕರಾರಿಲ್ಲ. ಆದರೆ ಅವರನ್ನು ಬಂಧನದ ಬಳಿಕ ನಡೆಸಿಕೊಂಡ ರೀತಿ ಸರಿಯಲ್ಲ. ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿರುವ ಐಪಿಎಸ್ ಅಧಿಕಾರಿಗಳು ರವಿವಾರ ಸಂಜೀವ್ ಭಟ್‌ರ ಮನೆಗೂ ಹೋಗಿ ಅವರ ಪತ್ನಿಗೆ ತಮ್ಮ ನಿಲುವನ್ನು ತಿಳಿಸಿ ಬೆಂಬಲ ಸೂಚಿಸಿ ಬಂದಿದ್ದಾರೆ.

ಗುಜರಾತ್‌ನ ಐಪಿಎಸ್ ಅಧಿಕಾರಿಗಳು ತೆಗೆದುಕೊಂಡಿರುವ ಈ ನಿರ್ಧಾರ ಅತ್ಯಂತ ಮಹತ್ವದ್ದು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಪೊಲೀಸರ ಪರೋಕ್ಷ ಸಹಕಾರದಿಂದಲೇ ದೊಡ್ಡ ಸಂಖ್ಯೆಯಲ್ಲಿ ಅಮಾಯಕರು ಬಲಿಯಾಗುವಂತಾಯಿತು ಎಂಬುದು ಎಲ್ಲ ಮಾನವ ಹಕ್ಕು ಸಂಘಟನೆಗಳು ಹಾಗು ಕಾರ್ಯಕರ್ತರ ದೂರು. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರಕ್ಕೆ ತಲೆನೋವು ತರಬಲ್ಲ ಸತ್ಯಗಳು ಬೆಳಕಿಗೆ ಬಾರದಂತೆ ಮಾಡುವಲ್ಲೂ ಪೊಲೀಸರ ಪಾತ್ರ ಬಹಳ ದೊಡ್ಡದು. ಈ ಎಲ್ಲ ವರ್ಷಗಳಲ್ಲಿ ನರೇಂದ್ರ ಮೋದಿಗೆ ಅಲ್ಲಿನ ಬಹುತೇಕ ಪೊಲೀಸ್ ಅಧಿಕಾರಿಗಳು ಅದರಲ್ಲೂ ಐಪಿಎಸ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಲೇ ಬಂದಿದ್ದಾರೆ. ಅಧಿಕಾರಶಾಹಿ ಅದರಲ್ಲೂ ಪೊಲೀಸ್ ವ್ಯವಸ್ಥೆಯ ಬೆಂಬಲ ಯಾವುದೇ ಸರಕಾರಕ್ಕೆ ಬಹುಮುಖ್ಯ.  ಹತ್ಯಾಕಾಂಡಕ್ಕೆ ಸಂಬಂಧಿಸಿ ಕಾನೂನು ಸುಳಿಯಲ್ಲಿ ಸಿಲುಕುವ ಅಪಾಯ ಎದುರಿಸುತ್ತಿರುವ ಮೋದಿಯವರಿಗಂತೂ ಪೊಲೀಸರ ಸಹಕಾರ ಅನಿವಾರ್ಯ.

ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರಕಾರವೇ ಬಂಧಿಸಿದ ಪೊಲೀಸ ಅಧಿಕಾರಿಯ ಬೆಂಬಲಕ್ಕೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಒಗ್ಗಟ್ಟಾಗಿ ನಿಂತಿರುವುದು ಮೋದಿ ಪಾಲಿಗೆ ದೊಡ್ಡ ತಲೆನೋವು ತರುವ ವಿಚಾರ. ಗುಜರಾತ್ ಪೊಲೀಸರ ಒಗ್ಗಟ್ಟು ಇದೇ ರೀತಿ ಮುಂದುವರಿದರೆ ಗುಜರಾತ್ ಹತ್ಯಾಕಂಡ ಕುರಿತ ತನಿಖೆಗೂ ಮಹತ್ವದ ತಿರುವು ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಆದರೆ ಸಂಜೀವ್ ಭಟ್‌ರನ್ನು ಬೆಂಬಲಿಸುವ ಗುಜರಾತ್ ಐಪಿಎಸ್ ಅಧಿಕಾರಿಗಳ ನಿರ್ಧಾರದಿಂದ ಹೆಚ್ಚಿನ ಕನ್ನಡ ಪತ್ರಿಕೆಗಳು ಮಾತ್ರ ಭಾರೀ ಆಘಾತಗೊಂಡಂತಿದೆ. ಈ ಆಘಾತದ ಪ್ರಮಾಣ ಅದೆಷ್ಟಿದೆಯೆಂದರೆ ಆ ಸುದ್ದಿಯನ್ನೇ ಪ್ರಕಟಿಸಲು ಮರೆತು ಬಿಡುವಷ್ಟು . ಮೋದಿಗೆ ಬರಲಿರುವ ಸಂಭಾವ್ಯ ತಲೆನೋವು ಬಹುತೇಕ ಕನ್ನಡ ಪತ್ರಿಕೆಗಳ ಸಂಪಾದಕರಿಗೆ ಈಗಲೇ ಇಷ್ಟು ದೊಡ್ಡ ತಲೆನೋವಾಗಿ ಕಾಡಿರುವುದು ನಿಜಕ್ಕೂ ಕನ್ನಡ ಪತ್ರಿಕೋದ್ಯಮದ ಹಾಗು ಓದುಗರ ಪಾಲಿನ ಭಾರೀ ದುರಂತವೇ ಸರಿ. ವಿಜಯ ಕರ್ನಾಟಕ ಪತ್ರಿಕೆ ಮಾತ್ರ ಈ ಸುದ್ದಿಯನ್ನು ಒಳಗಿನ ಪುಟದಲ್ಲಿ ಪ್ರಕಟಿಸಿದ್ದು ಬಿಟ್ಟರೆ ಉಳಿದೆಲ್ಲ ಪ್ರಮುಖ ಪತ್ರಿಕೆಗಳು (ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ) ಆ ಸುದ್ದಿಯ ತಂಟೆಗೆ ಹೋಗಲಿಲ್ಲ.

ಈ ಸುದ್ದಿಯನ್ನು ಮುಖಪುಟದಲ್ಲೇ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿದ (ಸೋಮವಾರ ಅಕ್ಟೋಬರ್ 10,2011) ವಾರ್ತಾಭಾರತಿ ಪತ್ರಿಕಾಧರ್ಮವನ್ನು ಎತ್ತಿಹಿಡಿಯುವ ಮೂಲಕ ಕನ್ನಡ ಪತ್ರಿಕೋದ್ಯಮದ ಮಾನವನ್ನೂ ಹರಾಜಾಗದಂತೆ ತಡೆಯಿತು.  




Wednesday, July 13, 2011

ದಯಾನಿಧಿ ಹಗರಣ ಮೊದಲು ವರದಿ ಮಾಡಿದ್ದು ಯಾರು ? ನೀವೇ ಹೇಳಿ.

2ಜಿ ಹಗರಣದಲ್ಲಿ 700ಕೋಟಿ ರೂ.ಲಂಚ ಪಡೆದ ಆರೋಪ ಎದುರಿಸುತ್ತಿರುವ ಕೇಂದ್ರದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಗುರುವಾರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸುದ್ದಿ ಇಂದಿನ ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟದ ಲೀಡ್ ನ್ಯೂಸ್. ಆದರೆ ದಯಾನಿಧಿ ಮಾರನ್ ಇಂತಹದೊಂದು ರಾಡಿಯಲ್ಲಿ ಸಿಲುಕಿದ್ದಾರೆ ಎಂದು ಕನ್ನಡ ಓದುಗರ ಗಮನಕ್ಕೆ ಮೊದಲು ತಂದವರು ಯಾರು ? ಈ ಪ್ರಕರಣದ ಕುರಿತು ಮೊದಲು ವರದಿ ಮಾಡಿದ ಕನ್ನಡ ಪತ್ರಿಕೆ ಯಾವುದು ? 
ಶುಕ್ರವಾರದ ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ದಯಾನಿಧಿ ಮಾರನ್ ಎಂಬ ಶೀರ್ಷಿಕೆಯಲ್ಲಿ ದಯಾನಿಧಿ ಮಾರನ್ ರಾಜೀನಾಮೆ ನೀಡಿದ ಸುದ್ದಿ ಪ್ರಕಟವಾಗಿದೆ. ಅದರಲ್ಲಿರುವ ಬಾಕ್ಸ್ ಐಟಮೊಂದು ಹೀಗಿದೆ. ''ಮೇ.30ರಂದೇ ಉದಯವಾಣಿ ವರದಿ ಮಾಡಿತ್ತು '' ಎಂಬ ಶೀರ್ಷಿಕೆಯಿರುವ ಈ ಬಾಕ್ಸ್ ಐಟಂನಲ್ಲಿ ದಯಾನಿಧಿ ಹಗರಣದ ಕುರಿತು ಪ್ರಕಟವಾದ ವರದಿಯಿರುವ ಉದಯವಾಣಿಯ ಮೇ.30,2011ರ ಸಂಚಿಕೆಯ ಮುಖಪುಟದ ಚಿತ್ರವಿದೆ. ಜೊತೆಗೆ ''ಹಗರಣದಲ್ಲಿ ದಯಾನಿಧಿ ಭಾಗಿಯಾಗಿರುವ ಕುರಿತು ಉದಯವಾಣಿ ಮೇ.30ರಂದೇ ವರದಿ ಮಾಡಿತ್ತು. ಈ ವರದಿ ಮಾಡಿದ ಮೊದಲ ಕನ್ನಡ ದಿನಪತ್ರಿಕೆ ಉದಯವಾಣಿ '' ಎಂಬ ಒಕ್ಕಣೆಯಿದೆ. 
ಶುಕ್ರವಾರದ ವಾರ್ತಾಭಾರತಿ ದೈನಿಕದ ಮುಖಪುಟದಲ್ಲೂ ರಾಜಾನ ಸೆರೆಮನೆಯತ್ತ ಮಾರನ್ ಎಂಬ ಶೀರ್ಷಿಕೆಯಲ್ಲಿ ದಯಾನಿಧಿ ರಾಜೀನಾಮೆ ಲೀಡ್ ಸುದ್ದಿಯಾಗಿದೆ. ಈ ಸುದ್ದಿಯಲ್ಲೊಂದು ಬಾಕ್ಸ್ ಐಟಂ ಇದೆ. ''20ಸಾವಿರ ಕೋಟಿ ದಯಾನಿಧಿ '' ಎಂಬ ಶೀರ್ಷಿಕೆಯಲ್ಲಿ ಮೇ 28,2011ರ ವಾರ್ತಾಭಾರತಿಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿಯ ಚಿತ್ರವಿರುವ ಈ ಬಾಕ್ಸ್ ನಲ್ಲಿ ''ಬೊಕ್ಕಸಕ್ಕೆ 20ಸಾವಿರ ಕೋಟಿ ರೂ.ನಷ್ಟ ಉಂಟುಮಾಡಿ ದಯಾನಿಧಿ ಮಾರನ್ ತನ್ನ ಕುಟುಂಬದ ಒಡೆತನದ ಕಂಪೆನಿಗೆ ಅಕ್ರಮವಾಗಿ 700ಕೋಟಿ ರೂ.ಬಂಡವಾಳ ಪಡೆದಿರುವ ಬಗ್ಗೆ ತೆಹೆಲ್ಕಾ ವರದಿಯನ್ನು ಆಧರಿಸಿ ಮೇ.28,2011ರಂದು  ವಾರ್ತಾಭಾರತಿಯ ಮುಖಪುಟದಲ್ಲಿ ವರದಿ ಪ್ರಕಟಿಸಿದೆ. ಈ ಪ್ರಮುಖ ವರದಿ ಪ್ರಕಟಿಸಿದ ಮೊದಲ ಕನ್ನಡ ದೈನಿಕ ವಾರ್ತಾಭಾರತಿ'' ಎಂದು ವಿವರವಿದೆ. 
ಹಾಗಾದರೆ ನೀವೇ ಹೇಳಿ, ದಯಾನಿಧಿ ಮಾರನ್ ಹಗರಣದ ಕುರಿತು ಮೊದಲು ವರದಿ ಪ್ರಕಟಿಸಿದ ಕನ್ನಡ ದಿನಪತ್ರಿಕೆ ಯಾವುದು ?

 
 


Thursday, May 26, 2011

ಇವರ ಪತ್ರಿಕಾ ಧಮ್ಮಕ್ಕೆ ಏನಾಗಿದೆ ?

ಮೇ 24 2011ರಂದು ಉಡುಪಿಯಲ್ಲಿ ನಡೆದ ಬೃಹತ್ ಸಮಾವೇಶವೊಂದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬೌದ್ಧ ಭಿಕ್ಕು ಮನೋರಖ್ಖಿತ ಭಂತೇಜಿ ಅವರ ನೇತೃತ್ವದಲ್ಲಿ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದ ದಲಿತರು ಇನ್ನು ಮುಂದೆ 33ಕೋಟಿ ದೇವರನ್ನು ನಂಬುವುದಿಲ್ಲ. ಮದುವೆ, ಶುಭ ಕಾರ್ಯಗಳಿಗೆ ಬ್ರಾಹ್ಮಣರಿಂದ ಪೂಜೆ ಮಾಡಿಸುವುದಿಲ್ಲ ಎಂದೂ ಘೋಷಿಸಿದರು. ಜೊತೆಗೆ ತಮ್ಮ ಬೌದ್ಧ ಧರ್ಮ ದೀಕ್ಷೆಗೆ ವಿರೋಧ ವ್ಯಕ್ತಪಡಿಸಿ ವೈಷ್ಣವ ದೀಕ್ಷೆಯ ಆಫರ್ ಕೊಟ್ಟಿದ್ದ ಉಡುಪಿಯ ಪೇಜಾವರ ಶ್ರೀಗಳೇ ಬೌದ್ಧ ಧರ್ಮ ಸ್ವೀಕರಿಸಲಿ ಎಂದು ಅವರಿಗೆ ಸವಾಲು ಹಾಕಿದರು.

ಈ ಎಲ್ಲ ಕಾರಣಗಳಿಂದ ಇದು ಇಡೀ ರಾಜ್ಯದ ಜನರ ಗಮನ ಸೆಳಯಬೇಕಾದ ಅತ್ಯಂತ ಪ್ರಮುಖ ಸುದ್ದಿಯಾಗಿತ್ತು. ಆದರೆ ವಾರ್ತಾಭಾರತಿ ದಿನಪತ್ರಿಕೆ ಹೊರತು ಪಡಿಸಿದರೆ ಬೇರ ಯಾವುದೇ ಪತ್ರಿಕೆಗಳಿಗೆ ಇದು ಕನಿಷ್ಟ ಮುಖಪಟದಲ್ಲಿ ಹಾಕಬೇಕಾದ ಸುದ್ದಿ ಎಂದೂ ಅನಿಸಲಿಲ್ಲ. ಪ್ರಜಾವಾಣಿ ಹಾಗು ಕನ್ನಡ ಪ್ರಭ ಪತ್ರಿಕೆಗಳು ಈ ಮಹತ್ವದ ಸುದ್ದಿಯನ್ನು ಮೂರನೇ ಪುಟದಲ್ಲಿ ಕೇವಲ ಎರಡು ಕಾಲಂಗಳಲ್ಲಿ ಮುಗಿಸಿದರೆ, ಸಂಯುಕ್ತ ಕರ್ನಾಟಕ ಮೂರನೇ ಪುಟದಲ್ಲಿ ಈ ಸುದ್ದಿಯನ್ನು ಮೂರು ಕಾಲಂನಲ್ಲಿ ಹಾಕುವ ಔದಾರ್ಯ ತೋರಿತು.ವಿಜಯ ಕರ್ನಾಟಕ 5ನೆ ಪುಟದಲ್ಲಿ ಮೂರು ಕಾಲಂ ಸುದ್ದಿ ಹಾಕಿ ಕೈತೊಳೆದುಕೊಂಡಿತು. 

ಇನ್ನು ಈ ಸುದ್ದಿಯನ್ನು ಪ್ರಕಟಿಸಿಯೂ ಸತ್ಯವನ್ನು ಮುಚ್ಚಿಟ್ಟ, ಕಾಟಾಚಾರದ ಹಾಗು ಮೋಸದ ವರದಿಗಾರಿಕೆ ಮಾಡಿದ ಶ್ರೇಯಸ್ಸು ಖಂಡಿತವಾಗಿ ಉದಯವಾಣಿ ಹಾಗು ಪ್ರಜಾವಾಣಿ ಪತ್ರಿಕೆಗಳಿಗೆ ಸಲ್ಲಲೇಬೇಕು. ತನ್ನ 12ನೆ ಪುಟದಲ್ಲಿ 'ಅಂತರಂಗದ ಕಣ್ಣು ತೆರೆದಾಗ ಜ್ಞಾನೋದಯ' ಎಂಬ ಶೀರ್ಷಿಕೆ ಹಾಗು 'ಧಮ್ಮ ದೀಕ್ಷೆ ಬೌದ್ಧ ಸಮಾವೇಶದಲ್ಲಿ ಮನೋರಖ್ಖಿತ ಭಂತೇಜಿ' ಎಂಬ ಉಪಶೀರ್ಷಿಕೆಯಲ್ಲಿ ನಾಲ್ಕು ಕಾಲಂನ ಫೋಟೋ ಸಹಿತ ವರದಿ ಪ್ರಕಟಿಸಿದೆ ಉದಯವಾಣಿ. ಆದರೆ ಇಡೀ ವರದಿಯಲ್ಲಿ ಎಲ್ಲೂ ಈ ಕಾರ್ಯಕ್ರಮದಲ್ಲಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದರು ಎಂಬುದು ಮಾತ್ರ ತಪ್ಪಿಯೂ ಉಲ್ಲೇಖವಾಗಲೇ ಇಲ್ಲ್ಲ !

ಇನ್ನು ಪ್ರಜಾವಾಣಿ. ಆ ಪತ್ರಿಕೆಯ ಮೂರನೇ ಪುಟದಲ್ಲಿ 'ಧರ್ಮವನ್ನು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡದಿರಿ' ಎಂಬ ಶೀರ್ಷಿಕೆಯಲ್ಲಿ ಉಡುಪಿ ಸಮಾವೇಶದ ವರದಿ ಪ್ರಕಟವಾಗಿದೆ. ಆದರೆ ವಿಪರ್ಯಾಸ ನೋಡಿ. ಇದರಲ್ಲೂ ಆ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದ ವಿಷಯವೇ ವರದಿಯಾಗಿಲ್ಲ. ಉದಯವಾಣಿಯಲ್ಲಿ ಉಡುಪಿ ಸಮಾವೇಶವನ್ನು ೞಧಮ್ಮ ದೀಕ್ಷೆ ಹಾಗು ಬೌದ್ಧ ಸಮಾವೇಶ ೞಕಾರ್ಯಕ್ರಮ ಎಂದಾದರೂ ಬರೆಯುವ ಸೌಜನ್ಯ ತೋರಿಸಿದ್ದರೆ ಪ್ರಜಾವಾಣಿಯ ವರದಿಯಲ್ಲಿ ಆ ಕಾರ್ಯಕ್ರಮವನ್ನು ಬೌದ್ಧ ಸಮಾವೇಶ ಎಂದು ಮಾತ್ರ ಬರೆಯಲಾಗಿದೆ.ಪೇಜಾವಾರ ಸ್ವಾಮೀಜಿಗಳಿಗೆ, ಬ್ರಾಹ್ಮಣ್ಯಕ್ಕೆ ಸವಾಲು ಹಾಕುವ ದಲಿತರು ಬೌದ್ಧ ಧಮ್ಮ ದೀಕ್ಷೆ ಕಾರ್ಯಕ್ರಮದ ಕುರಿತು ಉದಯವಾಣಿಯ ಅಲರ್ಜಿ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಪ್ರಜಾವಾಣಿಯ ಪತ್ರಿಕಾ ಧರ್ಮವನ್ನು ನೇಣಿಗೇರಿಸಿರುವ ಜನಿವಾರ ಯಾವುದು ಎಂಬುದು ಮಾತ್ರ ನಿಗೂಢ ನಿಗೂಢ !!

ಅಂದ ಹಾಗೆ ಉಳಿದ ಎಲ್ಲ ಕನ್ನಡ ಪತ್ರಿಕೆಗಳು ಈ ಸಮಾವೇಶದ ವರದಿಯನ್ನು ಪ್ರಕಟಿಸಿರುವುದು ತಮ್ಮ ಮಂಗಳೂರು ಆವೃತ್ತಿಯಲ್ಲಿ ಮಾತ್ರ. ಈ ಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಪ್ರಮುಖ ಕಾರ್ಯಕ್ರಮದ ಕುರಿತು ಒಂದಕ್ಷರದ ಸುದ್ದಿಯೂ ಪ್ರಕಟವಾಗಿಲ್ಲ. ತನ್ನ ಎಲ್ಲ ಆವೃತ್ತಿಗಳಲ್ಲೂ (ಮಂಗಳೂರು ಹಾಗು ಬೆಂಗಳೂರು) ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ ಧಮ್ಮ ದೀಕ್ಷೆಯ ವರದಿಯನ್ನು ಫೋಟೋ ಸಹಿತ ಪ್ರಕಟಿಸಿದ್ದು ವಾರ್ತಾಭಾರತಿ ಮಾತ್ರ.









Sunday, April 24, 2011

ಕನ್ನಡ ಪತ್ರಿಕೆಗಳು ಕೇಸರಿ ಕನ್ನಡಕ ಕಳಚಿಡುವುದು ಯಾವಾಗ ?

2002ರ ಗುಜರಾತ್ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗು ಅವರ ನೇತೃತ್ವದ ರಾಜ್ಯ ಸರಕಾರದ ನೇರ ಪಾತ್ರವಿತ್ತು ಎಂಬುದನ್ನು ಸಾಮಾನ್ಯ ಜ್ಞಾನ ಇರುವ ಯಾರೂ ಒಪ್ಪುವ ವಿಷಯ. ಆದರೆ ಆ ಸರಕಾರದ ಅಧೀನದಲ್ಲಿ ಇನ್ನೂ ಸೇವೆಯಲ್ಲಿರುವ ಓರ್ವ ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿಯೇ ಹತ್ಯಾಕಾಂಡ ನಡೆಯಲು ಮೋದಿ ಪ್ರಚೋದನೆಯೇ ಕಾರಣ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿರುವುದು ಅತ್ಯಂತ ಮಹತ್ವದ ಬೆಳವಣಿಗೆ .

ಮೋದಿ ವಿರುದ್ಧ ಅಫಿದಾವಿತ್ ಸಲ್ಲಿಸಿರುವವರು ಸಾಮಾನ್ಯ ಪೊಲೀಸ್ ಅಧಿಕಾರಿಯಲ್ಲ. ನಿವೃತ್ತ ಅಧಿಕಾರಿಯೂ ಅಲ್ಲ. 2002ರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಗುಜರಾತಿನ ಗುಪ್ತಚರ ವಿಭಾಗದ ಡಿಸಿಪಿ (ಉಪಾಯುಕ್ತ) ರಾಗಿದ್ದವರು ಸಂಜೀವ ಭಟ್. ಗುಪ್ತಚರ ವಿಭಾಗದಲ್ಲಿ ಮಹತ್ವದ ಹುದ್ದೆಯಲ್ಲಿರುವವರಿಗೆ ಸಹಜವಾಗಿಯೇ ರಾಜ್ಯದ ಆಗುಹೋಗುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದಿರುತ್ತದೆ. ಸಾಲದ್ದಕ್ಕೆ ಫೆಬ್ರವರಿ 27,2002ರಂದು ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆಸಿದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೂ ತಾನು ಹಾಜರಿದ್ದೆನೆಂದು ಸಂಜೀವ್ ಭಟ್ ಹೇಳಿದ್ದಾರೆ. ಆ ಸಭೆಗೆ ಅವರನ್ನು ನಾನೇ ಬಿಟ್ಟು ಬಂದೆ ಎಂದು ಅವರ ಚಾಲಕ ಕೂಡ ಹೇಳಿಕೆ ನೀಡಿದ್ದಾನೆ. ಆದ್ದರಿಂದ ಆ ಸಭೆಯಲ್ಲಿ ಮೋದಿ ಏನು ಹೇಳಿದ್ದರೆಂಬ ಕುರಿತು ಸಂಜೀವ್ ಭಟ್ ನೀಡಿರುವ ಮಾಹಿತಿಗೆ ಭಾರೀ ಮಹತ್ವವಿದೆ. ಸುಮಾರು ಎರಡು ಸಾವಿರ ಮಂದಿಯ ಮಾರಣ ಹೋಮ  ಹಿಂದಿನ ಸತ್ಯ ಸಂಜೀವ್ ಭಟ್‌ರ ಸಾಕ್ಷದ ಮೂಲಕ ಹೊರಬಿದ್ದಿದೆ.
 

ರಾಜ್ಯದ ಮುಖ್ಯಮಂತ್ರಿಯೇ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯದವರು ಸಿಟ್ಟು ತೀರಿಸಿಕೊಳ್ಳಲು ಬಿಟ್ಟು ಬಿಡಿ. ಅವರಿಗೆ ಪಾಠ ಕಲಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು ಎಂದು ಸಂಜೀವ್ ಭಟ್ ಸಾಕ್ಷ ನುಡಿದಿದ್ದಾರೆ. ಅಲ್ಲಿಗೆ ಗುಜರಾತ್ ಹತ್ಯಾಕಾಂಡದ ಕುರಿತು ಎಲ್ಲ ಪ್ರಜ್ಞಾವಂತರಿಗೆ, ಜನಪರ ಸಂಘಟನಗಳಿಗೆ ಇದ್ದ ಸಂಶಯ ನಿಜವಾಗಿದೆ. ಅಭಿವೃದ್ಧಿಯ ಹರಿಕಾರನೆಂಬ ವೇಷದಲ್ಲಿರುವ ಮೋದಿಯ ನಿಜ ರೂಪವನ್ನು ಬಯಲು ಮಾಡಿದ್ದಾರೆ ಅವರದೇ ರಾಜ್ಯದ ದಿಟ್ಟ ಪೊಲೀಸ್ ಅಧಿಕಾರಿ ಸಂಜೀವ್ ಭಟ್. ಇಡೀ ಜಗತ್ತಿನೆದುರು ಮುಖವಾಡ ಕಳೆದುಕೊಂಡು ನಿಂತಿದ್ದಾರೆ ಮೋದಿ.
 

ಆದರೆ ಜಗತ್ತು ಮೇಲೆ ಕೆಳಗಾದರೂ ನಮ್ಮ ಕನ್ನಡ ಪತ್ರಿಕೆಗಳು ಹಾಕಿಕೊಂಡ ಕೇಸರಿ ಕನ್ನಡಕದಲ್ಲಿ ಅದು ಅವುಗಳಿಗೆ ಕಾಣುವುದೇ ಇಲ್ಲ. ಮೋದಿ ವಿರುದ್ಧ ಸಂಜೀವ್ ಭಟ್ ನೀಡಿರುವ ಸಾಕ್ಷ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಶನಿವಾರ (ಫೆಬ್ರವರಿ 23, 2011)ದ ಎಲ್ಲ ರಾಷ್ಟ್ರಮಟ್ಟದ ಇಂಗ್ಲೀಷ್ ದೈನಿಕಗಳಲ್ಲಿ ಮುಖಪುಟದ ಲೀಡ್ ಸುದ್ದಿ ಅಥವಾ ಪ್ರಮುಖ ಸುದ್ದಿ ಸಂಜೀವ್ ಭಟ್‌ರ ಹೇಳಿಕೆ.
ಆದರೆ ಸದಾ ಮೋದಿಯ ಬಹುಪರಾಕ್ ಹಾಡುವ ಕನ್ನಡದ ಪತ್ರಿಕೆಗಳಿಗೆ ಇಷ್ಟೊಂದು ದೊಡ್ಡ ಸುದ್ದಿ ಮುಖಪುಟದಲ್ಲಿ ಲೀಡ್ ಆಗದಿದ್ದರೂ, ಪ್ರಮುಖ ಸುದ್ದಿಯಾಗಿ ಪ್ರಕಟವಾಗಬೇಕೆಂದು ಅನಿಸಲೇ ಇಲ್ಲ. ಪ್ರಜಾವಾಣಿ ಸಹಿತ ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ ಹಾಗು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಈ ಸುದ್ದಿಯನ್ನು ಒಲ್ಲದ ಮನಸ್ಸಿನಿಂದ ಪ್ರಕಟಿಸಿವೆ.  ವಿಜಯ ಕರ್ನಾಟಕ ಮುಖಪುಟದಲ್ಲಿ ಒಂದು ಪ್ಯಾರಾದ ಸುದ್ದಿ ಪ್ರಕಟಿಸುವ ಕೃಪೆ ತೋರಿದರೆ ಉಳಿದ ಕನ್ನಡ ಪತ್ರಿಕೆಗಳು ಈ ಸುದ್ದಿಯನ್ನು ಮುಲಾಜಿಲ್ಲದೆ ಒಳಗಿನ ಪುಟಕ್ಕೆ ದೂಡಿಬಿಟ್ಟಿವೆ.
 

ಈ ಸುದ್ದಿಯನ್ನು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ ಪ್ರಕಟಿಸಿದ ಏಕೈಕ ಕನ್ನಡ ಪತ್ರಿಕೆ ವಾರ್ತಾಭಾರತಿ. ಈ ಹಿಂದೆ ಸಂಜೀವ್ ಭಟ್ ವಿಶೇಷ ತನಿಖಾ ತಂಡದೆದುರು ಇದೇ ಹೇಳಿಕೆಯನ್ನು ನೀಡಿದ್ದಾಗಲೂ ವಾರ್ತಾಭಾರತಿ ಆ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿತ್ತು.
















Sunday, February 6, 2011

ರೈತರು ಆತ್ಮಹತ್ಯೆ ಮಾಡಿದರೆ ಇವರಿಗೆ ಸುದ್ದಿಯೇ ಅಲ್ಲ !

ಶುಕ್ರವಾರ ಇಡೀ ನಾಡು ರಾಜಧಾನಿಯಲ್ಲಿ ನಡೆಯುತ್ತಿದ್ದ ವಾರ್ಷಿಕ ನುಡಿ ಸಂಭ್ರಮವನ್ನು ನೋಡಿ ಖುಷಿ ಪಡುತ್ತಿದ್ದರೆ ಗುಲ್ಬರ್ಗದಲ್ಲಿ ನಮ್ಮ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದರು. ಅವರು ಬೆಳೆದ ತೊಗರಿಗೆ ಸರಕಾರ ಬೆಂಬಲ ಬೆಲೆ ನೀಡಲು ಒಪ್ಪದೆ ಅವರು ಬೀದಿಪಾಲಾಗುವ ಪರಿಸ್ಥಿತಿ ಬಂದಿತ್ತು. ಆದ್ದರಿಂದ ಉಪವಾಸ ಸತ್ಯಾಗ್ರಹ ಕೈಗೊಂಡರೂ ಸರಕಾರ ಗಮನ ಹರಿಸಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ರೈತರು ವಿಷ ಸೇವಿಸಿ ಪ್ರಾಣ ಬಿಡಲು ಮುಂದಾದರು. ಈ ಪೈಕಿ ಐವರು ರೈತರ ಪರಿಸ್ಥಿತಿ ಗಂಭೀರವಾಯಿತು.

ಇಲ್ಲಿ ನೇಗಿಲಯೋಗಿ..... ಎಂದು ಹಾಡಿ ರಾಜ್ಯದ ಜನರು ಸಾಹಿತ್ಯ ಸಂಭ್ರಮದಲ್ಲಿರುವಾಗ ನಮ್ಮ ರೈತರು ಸಾಮೂಹಿಕವಾಗಿ ಆತ್ಮಹತ್ಯೆಗೆ ಮುಂದಾಗಿರುವ ಪರಿಸ್ಥಿತಿ ಬಂದಿರುವುದು ನಮ್ಮ ರಾಜ್ಯದ ದುರಂತ. ಆದರೆ ಅದಕ್ಕಿಂತ ದೊಡ್ಡ ದುರಂತ ನೋಡಿ. ಇಷ್ಟು ದೊಡ್ಡ ದುರ್ಘಟನೆ ಸಂಭವಿಸಿದರೆ ಅದನ್ನು ವರದಿ ಮಾಡಲು ಮನಸ್ಸಾಗದ ಪತ್ರಿಕೆಗಳೂ ನಮ್ಮ ರಾಜ್ಯದಲ್ಲಿವೆ ಎಂಬುದು ಅದಕ್ಕಿಂತ ದೊಡ್ಡ ದುರಂತವಲ್ಲವೇ ?

ಕನ್ನಡ ಪತ್ರಿಕೆಗಳಿಗೆ ಹಿರಿಯಣ್ಣನ ಸ್ಥಾನದಲ್ಲಿರುವ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಹಾಗು ತನ್ನನ್ನು ೞಓದುಗರು ರೂಪಿಸಿದ ನೇತಾರೞಎಂದು ಘೋಷಿಸಿಕೊಂಡಿರುವ ಉದಯವಾಣಿ -ಈ ಎರಡೂ ದಿನಪತ್ರಿಕೆಗಳಿಗೆ ರೈತರು ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸುದ್ದಿಯಾಗಬೇಕಾದ ವಿಷಯ ಎಂದು ಅನಿಸಲೇ ಇಲ್ಲ ! ಇವರದ್ದು ಎಂತಹ ಘನ ಪತ್ರಿಕೋದ್ಯಮವಾಗಿರಬಹುದು?

ವಿಜಯ ಕರ್ನಾಟಕ ಮುಖಪುಟದಲ್ಲಿ ಕೇವಲ ಒಂದು ಪ್ಯಾರಾ ಸುದ್ದಿ ಹಾಕಿದರೂ 7ನೇ ಪುಟದಲ್ಲಿ ಆ ವಿಷಯದ ಕುರಿತು ಮತ್ತೆ ಎರಡು ಕಾಲಂನ ವರದಿ ಪ್ರಕಟಿಸಲು ಮನಸ್ಸು ಮಾಡಿತು. ಪ್ರಜಾವಾಣಿ ಮುಖಪುಟದಲ್ಲಿ ಒಂದು ಕಾಲಂ ಸುದ್ದಿ ಹಾಕಿ ಮುಗಿಸಿತು. ಕನ್ನಡ ಪ್ರಭ 15ನೇ ಪುಟದಲ್ಲಾದರೂ ವಿವರವಾಗಿಯೇ ಈ ಸುದ್ದಿಯನ್ನು ಪ್ರಕಟಿಸಿತು.

ಸಾಹಿತ್ಯ ಸಮ್ಮೇಳನದ ಸುದ್ದಿ ಭರಾಟೆಯ ನಡುವೆಯೂ ರೈತರ ಆತ್ಮಹತ್ಯೆಯ ಸುದ್ದಿಗೆ ಸೂಕ್ತ ಪ್ರಾಮುಖ್ಯತೆ ನೀಡಿ ಮುಖಪುಟದಲ್ಲೇ ವಿವರವಾಗಿ ಅದನ್ನು ಪ್ರಕಟಿಸಿ ಕನ್ನಡಿಗರ ಗಮನ ಸೆಳೆದಿದ್ದು ವಾರ್ತಾಭಾರತಿ ದಿನಪತ್ರಿಕೆ. ಜೊತೆಗೆ ಶನಿವಾರದ ತನ್ನ ಸಂಪಾದಕೀಯದಲ್ಲೂ ಈ ವಿಷಯವನ್ನು ಉಲ್ಲೇಖಿಸಿದೆ ವಾರ್ತಾಭಾರತಿ.

Saturday, February 5, 2011

ಜ್ಯೋತಿ ಗುರುಪ್ರಸಾದ್‌ ರ ಜೋಲಿ ಲಾಲಿ ಅಂಕಣ ಪುಸ್ತಕ ರೂಪದಲ್ಲಿ

‘ವಾರ್ತಾಭಾರತಿ’‘ಯ ಜನಪ್ರಿಯ ಅಂಕಣಕಾರರಲ್ಲೊಬ್ಬರಾದ, ಖ್ಯಾತ ಕವಯತ್ರಿ-ಲೇಖಕಿ ಜ್ಯೊತಿ ಗುರುಪ್ರಸಾದ್ ಅವರ ಅಂಕಣ ಜೋಲಿ-ಲಾಲಿ’  ‘’‘ಇದೀಗ ಪುಸ್ತಕ ರೂಪದಲ್ಲಿ ಬಂದಿದೆ. ಬೆಂಗಳೂರಿನ ದೇಸಿ ಪುಸ್ತಕ ದವರು ಇದನ್ನು ಪ್ರಕಟಿಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ , ಮಹಿಳೆ ಮತ್ತಿತರ ವಿಷಯಗಳ ಕುರಿತು ಅತ್ಯಂತ ಆಪ್ತವಾಗಿ, ಸರಳವಾಗಿ ಬರೆದು ವಾರ್ತಾಭಾರತಿಯ ಅಪಾರ ಓದುಗರನ್ನು ತಮ್ಮ ಅಭಿಮಾನಿಯಾಗಿಸಿಕೊಂಡವರು ಜ್ಯೋತಿ ಗುರುಪ್ರಸಾದ್. ಹಲವು ಕಾಲೇಜುಗಳಲ್ಲಿ ಕನ್ನಡ-ಇಂಗ್ಲಿಷ್ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿರುವ ಜ್ಯೊತಿ ಗುರುಪ್ರಸಾದ್‌ರ ಚುಕ್ಕಿ’ ‘’‘ಕವನ ಸಂಕಲನಕ್ಕೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಬಂದಿದೆ.ಇವರ ಮಾಯಾಪೆಟ್ಟಿಗೆ ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್‌ನ ನೀಲಗಂಗಾ ದತ್ತಿ ಪ್ರಶಸ್ತಿ ಹಾಗು ನಿರತ ಸಾಹಿತ್ಯ ಪ್ರಶಸ್ತಿಗಳು ಸಂದಿವೆ. ಜ್ಯೋತಿ ಅವರ ಈ ಕ್ಷಣ‘  ಅಂಕಣ ಸಂಕಲನಕ್ಕೆ ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ.ಪ್ರಶಸ್ತಿ ದೊರೆತಿದೆ. 

ತಮ್ಮ ಹೊಸ ಕೃತಿಯಲ್ಲಿ ಜ್ಯೋತಿ ಗುರುಪ್ರಸಾದ್ ಅವರು ಬರೆದಿರುವ ಮುನ್ನುಡಿಯ ಕೆಲವು ಸಾಲುಗಳು ಇಲ್ಲಿವೆ...

.....ಎಂಟು ವರ್ಷಗಳ ಹಿಂದೆ ಆರಂಭವಾಗಿರುವ ‘ವಾರ್ತಾಭಾರತಿ’ ದಿನಪತ್ರಿಕೆ ಇಂದು ಪ್ರಗತಿಪರ ನಿಲುವಿನ ದಿನಪತ್ರಿಕೆ.ಈ ಪತ್ರಿಕೆ ಪ್ರತಿನಿಧಿಸುವ ಮನುಷ್ಯಪರ ಕಾಳಜಿಗಳನ್ನು ನಾನು ಗಮನಿಸುತ್ತಲೇ ಇದ್ದೆ. ಈ ಪತ್ರಿಕೆಗೆ ನಿಯಮಿತವಾಗಿ ಏನನ್ನಾದರೂ ಬರೆಯುವುದರ ಮೂಲಕ ನನ್ನ ಪಾಲನ್ನು ಇದರಲ್ಲಿ ಸೇರಿಸಬೇಕೆನಿಸುತ್ತಿತ್ತು. ನನ್ನ ಈ ಇಚ್ಛೆಗೆ ತಕ್ಕಂತೆ ವಾರ್ತಾಭಾರತಿ’‘ಯ ಸಂಪಾದಕೀಯ ಬಳಗದವರೂ-ಸಾಹಿತ್ಯ ವಲಯದ ಆಪ್ತರೂ ಆಗಿರುವ ಬಿ.ಎಂ.ಬಶೀರ್ ಅವರಿಂದ ನಾನು ವಾರ್ತಾಭಾರತಿ’‘ಗಾಗಿ ಪ್ರತಿವಾರ ಬರೆಯಬಹುದೆಂಬ ವಿಶ್ವಾಸವೂ ದೊರೆಯಿತು.ಅದಕ್ಕೆ ತಕ್ಕಂತೆ ವಾರ್ತಾಭಾರತಿಯ ಪ್ರಧಾನ ಸಂಪಾದಕರಾಗಿ ಪೋಷಿಸುತ್ತಿರುವ ಮಾನ್ಯ ಎ.ಎಸ್.ಪುತ್ತಿಗೆಯವರ ಸಹಮತವೂ ಸಂಪಾದಕೀಯ ಬಳಗದ ಸತೀಶ್ ಮುಂತಾದವರ ಸಹಕಾರವೂ ದೊರೆಯಿತು.....ಪ್ರೀತಿಯ ‘ವಾರ್ತಾಭಾರತಿ’ಪತ್ರಿಕೆಯ ಇಡೀ ಬಳಗಕ್ಕೆ ನನ್ನ ತುಂಬು ಹೃ ದಯದ ಕೃತಜ್ಞತೆ. ವಾರ್ತಾಭಾರತಿ’ಯಲ್ಲಿ ನನ್ನ ಈ ಜೋಲಿ ಲಾಲಿ ಅಂಕಣ ಬರಹದ ಯಾತ್ರೆ ಇನ್ನೂವರೆಗೂ ಸಾಗುತ್ತಿದೆ.ನನ್ನ ಚಿಂತನೆಯನ್ನೂ ಬದ್ಧತೆಯನ್ನೂ ಇನ್ನಷ್ಟು ಹರಿತಗೊಳಿಸಲು ಸಹಕಾರಿಯಾಗಿದೆ.....
  ಪುಸ್ತಕ ಪ್ರಕಾಶಕರು - ದೇಸಿ ಪುಸ್ತಕ,
# 121, 13ನೆ ಮುಖ್ಯರಸ್ತೆ, ಎಂ.ಸಿ.ಲೇ ಔಟ್,
ವಿಜಯ ನಗರ,ಬೆಂಗಳೂರು-40.ದೂರವಾಣಿ:080-23153558


Wednesday, February 2, 2011

ಕನ್ನಡ ಪತ್ರಿಕೆಗಳ ಕುರುಡುತನ, ಕಿವುಡುತನಕ್ಕೆ ಮದ್ದುಂಟೆ ?

ಭಯೋತ್ಪಾದಕ ವರದಿಗಳನ್ನು ಬರೆಯುವುದರಲ್ಲಿ ನಿಷ್ಣಾತರಾಗಿರುವ ನಮ್ಮ ಕನ್ನಡ ಪತ್ರಕರ್ತರಿಗೆ ಹಾಗು ಅವುಗಳನ್ನು ಭಾರೀ ಪ್ರಾಮುಖ್ಯತೆಯೊಂದಿಗೆ ಸರಣಿ ಧಾರಾವಾಹಿಯಂತೆ ಪ್ರಕಟಿಸುವ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಹಠಾತ್ತನೆ ಕುರುಡುತನ ಹಾಗು ಕಿವುಡುತನದ ರೋಗ ತಾತ್ಕಾಲಿಕವಾಗಿ ತಗುಲುವುದುಂಟು. ಈ ರೋಗ ಕೆಲವೇ ಕೆಲವು ನಿರ್ದಿಷ್ಟ ಸಮಯ (ಅಂದರೆ ದಿನ) ಮಾತ್ರ ಬಾಧಿಸಿ ನಂತರ ಮಾಯವಾಗುತ್ತದೆ. ಈ ಸಂದರ್ಭದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಎಷ್ಟೇ ಪ್ರಮುಖ ಬೆಳವಣಿಗೆಗಳು ಘಟಿಸಿದರೂ ಈ ಪತ್ರಕರ್ತರು ಹಾಗು ಪತ್ರಿಕೆಗಳಿಗೆ ಅದು ಕಣ್ಣಿಗೆ ಬೀಳುವುದೂ ಇಲ್ಲ, ಕಿವಿಗೆ ಕೇಳುವುದೂ ಇಲ್ಲ.

ನಿನ್ನೆ ಅಂದರೆ ಫಬ್ರವರಿ 1,2011ರಂದು ಮತ್ತೆ ಕನ್ನಡದ ಹೆಚ್ಚಿನ ಪತ್ರಿಕೆಗಳು ಹಾಗು ಪತ್ರಕರ್ತರು ಈ ಕುರುಡುತನ ಹಾಗು ಕಿವುಡುತನದ ರೋಗ ಪೀಡಿತರಾಗಿದ್ದಾರೆ. ಇಡೀ ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾದ ಮಾಲೆಗಾಂವ್ ಸ್ಫೋಟದ ತನಿಖೆಯಿಂದ ಕೇಸರಿ ಭಯೋತ್ಪಾದನೆಯ ಬೃಹತ್‌ ಜಾಲ ದೇಶದಲ್ಲಿರುವುದು ಬಯಲಾಯಿತು .   ಇಂತಹ ಬಾಂಬ್ ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡ ಆರೋಪ ಹೊತ್ತಿದ್ದ ಕರ್ನಾಟಕದ ಪ್ರವೀಣ್ ಮುತಾಲಿಕ್‌ನನ್ನು ಮಹಾರಾಷ್ಟ್ರ ಪೊಲೀಸರು ಇತ್ತೀಚಿಗೆ ಬಂಧಿಸಿದರು. ಆ ಬಳಿಕ ಮಂಗಳವಾರ ಆತನನ್ನು ಮಹಾರಾಷ್ಟ್ರದ    ವಿಶೇಷ ಮೋಕ ನ್ಯಾಯಾಯಲಕ್ಕೆ ಹಾಜರು ಪಡಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರವೀಣ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಹೊತ್ತಿರುವ ಅಭಿನವ್ ಭಾರತ್ ಸಂಘಟನೆಯ ರೂವಾರಿ ಲೆ.ಕ.ಶ್ರೀಕಾಂತ ಪುರೋಹಿತ್‌ನ ಬಂಟನಾಗಿದ್ದವನು. ಹಾಗಾಗಿ ಕೇಸರಿ ಭಯೋತ್ಪಾದನಾ ಜಾಲದಲ್ಲಿ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ, ಅವರ ಯೋಜನೆಗಳು ಏನೇನು ಎಂಬುದರ ಕುರಿತು ಬಹಳಷ್ಟು ಪ್ರಮುಖ ಮಾಹಿತಿಗಳನ್ನು ಈತನ ವಿಚಾರಣೆಯಿಂದ ಪಡೆಯುವ ಸಾಧ್ಯತೆಯಿದೆ. ಹಾಗಾಗಿ ಈತನ ಬಂಧನ ದೇಶದ ಯಾವುದೇ ಪತ್ರಿಕೆಗೆ ಪ್ರಮುಖ ಸುದ್ದಿ. ಜೊತೆಗೆ ಕರ್ನಾಟಕದ ವ್ಯಕ್ತಿಯೊಬ್ಬ ಇಂತಹ ಪ್ರಮುಖ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಇದೀಗ ಸೆರೆಯಾಗಿರುವುದು ಕನ್ನಡದ ಪತ್ರಿಕೆಗಳಿಗೆ ಸ್ವಾಭಾವಿಕವಾಗಿಯೇ ಬಹಳ ದೊಡ್ಡ ಸುದ್ದಿಯಾಗಬೇಕಿತ್ತು.

ಆದರೆ ದುರಂತ ನೋಡಿ. ಒಂದು ನಿರ್ದಿಷ್ಟ ಸಮುದಾಯದ ಮನುಷ್ಯರು ಜೋರಾಗಿ ಕೆಮ್ಮಿದರೂ ಅಲ್ಲಿ ಭಾರೀ ಸ್ಫೋಟದ ತಯಾರಿ ನಡೆಯುತ್ತಿದೆ...ಭಯೋತ್ಪಾದಕ ಜಾಲ ಸಕ್ರಿಯವಾಗಿದೆ... ಪಾಕಿಸ್ತಾನದವರು ಬಂದು ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ನೆಲೆಸಿದ್ದಾರೆ... ಮಸೀದಿ, ಮದ್ರಸಗಳಲ್ಲಿ ಭಯೋತ್ಪಾದಕ ತರಬೇತಿ ನೀಡಲಾಗುತ್ತಿದೆ...ಎಂದು ವರದಿಯ   ಹೆಸರಲ್ಲಿ ಪುಟಗಟ್ಟಲೆ ಕತೆ ಹೊಸೆಯುವ ಕನ್ನಡದ ಬಹುತೇಕ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ.

ದೇಶ, ವಿದೇಶಗಳ ಯಾವ ಮೂಲೆಯಲ್ಲಿ ಭಯೋತ್ಪಾದನೆ ಕುರಿತ ಕೇವಲ ವದಂತಿ ಇದ್ದರೂ ಅದರ ವಾಸನೆಯನ್ನು ಗ್ರಹಿಸುವ ಮೂಗು ಉದಯವಾಣಿಯದ್ದು.  ಆದರೆ ಇಲ್ಲೇ ತನ್ನ ಮೂಗಿನಡಿಯಲ್ಲೇ ದೇಶವನ್ನೇ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ ಪ್ರಕರಣವೊಂದರ ಪ್ರಮುಖ ಆರೋಪಿ ಬಂಧಿಸಲ್ಪಟ್ಟಿರುವುದು ಮಾತ್ರ ಉದಯವಾಣಿಗೆ ಗೊತ್ತೇ ಆಗಲಿಲ್ಲ. ಮಂಗಳವಾರ ಅಷ್ಟು ಕೊಳೆತು ಹೋಗಿತ್ತೇ ಉದಯವಾಣಿಯ ಸುದ್ದಿ ಮೂಗು ?  ಡಾಕ್ಟರ್ ಹನೀಫ್‌ನನ್ನು ಆಸ್ಟ್ರೇಲಿಯದಲ್ಲಿ ವಶಕ್ಕೆ ತೆಗೆದುಕೊಂಡಾಗ ಆತನ ವಿರುದ್ಧ ಸುಳ್ಳುಗಳ ಸರಮಾಲೆಯನ್ನೇ ಪ್ರಕಟಿಸಿತ್ತು ಉದಯವಾಣಿ. ಆಸ್ಟ್ರೇಲಿಯ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಹನೀಫ್‌ನ ಕ್ಷಮೆ ಯಾಚಿಸಿತು. ಸುಳ್ಳುಗಳ ಸರದಾರ ಉದಯವಾಣಿ ಆ ಸೌಜನ್ಯವನ್ನೂ ತೋರಿಸಿಲಿಲ್ಲ.

ಇನ್ನು ಹುಬ್ಬಳ್ಳಿಯಲ್ಲಿ ಕೇವಲ ಸಂಶಯದ ಮೇಲೆ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿದಾಗ ಅವರ ಬಳಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಮುಖಪುಟದಲ್ಲೇ ಸರಣಿ ಹಸಿ  ಹಸಿ ಸುಳ್ಳು ಬರೆದು ಓದುಗರಿಂದ ಛೀಮಾರಿ ಹಾಕಿಸಿಕೊಂಡ ಕನ್ನಡ ಪ್ರಭ ಪ್ರವೀಣ್ ಬಂಧನದ ಅಧಿಕೃತ ಸುದ್ದಿಯನ್ನು ಎಂಟನೇ ಪುಟದಲ್ಲಿ ಕೇವಲ ಒಂದು ಪ್ಯಾರಾ ಹಾಕಿ ಮುಗಿಸಿತು.


ಇನ್ನೊಂದು ಭಯೋತ್ಪಾದನೆ ಸ್ಪೆಶಲಿಸ್ಟ್ ಪತ್ರಿಕೆ ಸಂಯುಕ್ತ ಕರ್ನಾಟಕ ಈ ಸುದ್ದಿಗೆ ಸಂಪೂರ್ಣ ಕುರುಡಾಯಿತು. ಸುದ್ದಿ ಪ್ರಕಟಣೆಯ ಭಾಗ್ಯವನ್ನೇ ಪಡೆಯಲಿಲ್ಲ.

ಇನ್ನು ಸ್ವಘೋಷಿತ ಜಾತ್ಯತೀತ ಪತ್ರಿಕೆ ಪ್ರಜಾ ವಾಣಿ ಬುಧವಾರ ಈ ಸುದ್ದಿಯನ್ನು ಒಳಗಿನ ಪುಟದಲ್ಲಿ ಕೇವಲ ಒಂದು ಕಾಲಂನಲ್ಲಿ ಹಾಕಿ ಪ್ರಕಟಿಸಿದ ಶಾಸ್ತ್ರ ಮುಗಿಸಿಬಿಟ್ಟಿತು. ( ಅದೇ ದಿನ ಆ ಪತ್ರಿಕೆಯ ರಾಜ್ಯ ಪುಟದ ಒಂದು ಮೂಲೆಯಲ್ಲೂ ಈ ಸುದ್ದಿ ಅತ್ಯಂತ ಚಿಕ್ಕದಾಗಿ ಪ್ರಕಟವಾಗಿದೆ.  ಗೊತ್ತಾದರೆ ಪ್ರಜಾವಾಣಿಯ ಸಂಪಾದಕೀಯ ಸಿಬ್ಬಂದಿಗಳಿಗೆ ಶಾನೇ ಬೇಜಾರಾಗಬಹುದು !)

 
ವಿಜಯ ಕರ್ನಾಟಕ ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದೇ ದೊಡ್ಡ ಅಚ್ಚರಿ. ಅದರ ಸಂಪಾದಕೀಯ ವಿಭಾಗದಲ್ಲಿ ಇತ್ತೀಚಿಗೆ ಆದ ಪ್ರಮುಖ ಬದಲಾವಣೆಗಳ ಪರಿಣಾಮದಿಂದ ಹೀಗಾಗಿದೆ    . ಆದರೆ “ಮಾಲೆಗಾಂವ್: ಗೋಕಾಕದ ವ್ಯಕ್ತಿ ಸೆರೆ ‘’ಎಂದು ಅರೆಮನಸ್ಸಿನಿಂದ ನೀಡಿದ ಶೀರ್ಷಿಕೆಯಲ್ಲೇ ಸುದ್ದಿಯನ್ನು ಅರ್ಧ ಕೊಂದು ಬಿಡಲಾಗಿದೆ. ಪ್ರವೀಣ್ ಮೇಲಿರುವುದು ಮಾಲೆಗಾಂವ್‌ನ ಮಸೀದಿಯ ಹೊರಗೆ ನಿಲ್ಲಿಸಲಾಗಿದ್ದ ಬೈಕ್‌ನಲ್ಲಿ ಬಾಂಬ್ ಪ್ಲಾಂಟ್ ಮಾಡಿದ ಗುರುತರ ಆರೋಪ.
ಆ ಸ್ಫೋಟದಲ್ಲಿ  6ಮಂದಿ ಮೃತಪಟ್ಟಿದ್ದರು. ಇಂತಹ ಗಂಭೀರ ದುಷ್ಕೃತ್ಯವೆಸಗಿದ ಆರೋಪಿ, ಶಂಕಿತ ಭಯೋತ್ಪಾದಕ ವಿಜಯ ಕರ್ನಾಟಕಕ್ಕೆ  ಕೇವಲ ಒಬ್ಬ ವ್ಯಕ್ತಿ.
ಪ್ರವೀಣ್‌ ಮುತಾಲಿಕ್‌ನ ಬಂಧನದ ಸುದ್ದಿಗೆ  ಸೂಕ್ತ ಪ್ರಾಮುಖ್ಯತೆಯನ್ನು  ನೀಡಿ ಮುಖಪುಟದಲ್ಲೇ ಲೀಡ್ ಸುದ್ದಿಯಾಗಿ ಪ್ರಕಟಿಸಿ  ಈ ಪ್ರಮುಖ ಸುದ್ದಿಯನ್ನು ಕನ್ನಡಿಗರಿಗೆ ಸಮರ್ಪಕವಾಗಿ ತಲುಪಿಸಿದ್ದು  ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಮಾತ್ರ.





  

Friday, January 28, 2011

ಭಯೋತ್ಪಾದಕರನ್ನು ಮೀರಿಸಿದ ಪತ್ರಿಕೆಗಳು

2010ರ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಲಘು ಸ್ಪೋಟ ಪ್ರಕರಣದ ನಂತರ ಕನ್ನಡದ ಬಹುತೇಕ ಪತ್ರಿಕೆಗಳು ತೋರಿಸಿದ ಸಾಮಾಜಿಕ ಕಾಳಜಿ ಹಾಗು ತನಿಖಾ ಸಾಮರ್ಥ್ಯಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತುತಿ. ರಾಜ್ಯದ ಗೃಹ ಸಚಿವರು ಹಾಗು ಪೊಲೀಸ್ ಮಹಾ ನಿರ್ದೇಶಕರೇ ನಾಚಿಕೊಂಡು ಕೊನೆಗೆ ‘‘ ದಯಮಾಡಿ ನಮ್ಮ ಕೆಲಸ ಮಾಡಲು ನಮಗೂ ಸ್ವಲ್ಪ ಅವಕಾಶ ಕೊಡಿ ’’ ಎಂದು ಅಂಗಲಾಚಿ ಕೇಳಿಕೊಳ್ಳುವಷ್ಟು ಕ್ಷಿಪ್ರಗತಿಯಲ್ಲಿ ಇಡೀ ಪ್ರಕರಣದ ತನಿಖೆಯನ್ನು ಮುಗಿಸಿ ಅಪರಾಧಿಗಳನ್ನು ಗುರುತಿಸಿದ್ದವು ಕನ್ನಡದ ಪತ್ರಿಕೆಗಳು.

ಫೆಬ್ರವರಿ2010ರಲ್ಲಿ ಪುಣೆಯ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟಕ್ಕೂ ಬೆಂಗಳೂರು ಲಘು ಸ್ಫೋಟಗಳಿಗೂ ಸಾಮ್ಯತೆ ಇದೆ ಎಂಬ ಅಂಶ ಈ ಪತ್ರಿಕೆಗಳ ತನಿಖಾ ವರದಿಯಲ್ಲಿ ಭಾರೀ ಪ್ರಾಮುಖ್ಯತೆಯೊಂದಿಗೆ ಆಗಾಗ ಪ್ರಕಟವಾಗುತ್ತಿತ್ತು. ಪುಣೆ ಸ್ಫೋಟಕ್ಕೂ ಬೆಂಗಳೂರು ಘಟನೆಗೂ ಸಾಮ್ಯತೆಯಿಲ್ಲ, ಹಾಗು ಈ ಬಗ್ಗೆ ಈಗಲೇ ಹೇಳುವುದು ಸಾಧ್ಯವೂ ಇಲ್ಲ ಎಂದು ರಾಜ್ಯದ ಡಿಜಿಪಿಯವರೇ ಸ್ಪಷ್ಟವಾಗಿ ಹೇಳಿದ ಬಳಿಕವೂ ಈ ಸಾಮ್ಯತೆಯ ಅಂಶ ಆಗಾಗ ಕನ್ನಡ ಪತ್ರಿಕೆಗಳಲ್ಲಿ ರಾರಾಜಿಸುತ್ತಿತ್ತು.
















ಆದರೆ ವಿಪರ್ಯಾಸ ನೋಡಿ; ಕೆಲವೇ ದಿನಗಳ ಬಳಿಕ ಎಪ್ರಿಲ್30,2010ರಂದು ಅಜ್ಮೀರ್ ದರ್ಗಾ ಸ್ಫೋಟಕ್ಕೆ ಸಂಬಂಧಿಸಿ ರಾಜಸ್ತಾನದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಸಂಘಪರಿವಾರಕ್ಕೆ ಸೇರಿದ ದೇವೇಂದ್ರ ಗುಪ್ತ ಎಂಬವನನ್ನು ಹಾಗು ಆ ಬಳಿಕ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಬಂಧಿಸಿದರು. ಅಲ್ಲದೆ ಹೈದರಾಬಾದಿನ ಮಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟಕ್ಕೂ ಅಜ್ಮೀರ್ ದರ್ಗಾ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬುದನ್ನು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಹೊಸದಿಲ್ಲಿಯಲ್ಲಿ ಮೇ4,2010 ರಂದು ಬಹಿರಂಗಪಡಿಸಿದರು. ಎರಡೂ ಸ್ಫೋಟಕ್ಕೆ ಬಳಸಿದ ವಸ್ತುಗಳು ಹಾಗೂ ರೂಪುರೇಷೆಗಳಲ್ಲಿ ಸಾಮ್ಯತೆಯಿದೆ ಎಂದೂ ಅವರು ವಿವರ ನೀಡಿ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ತನಿಖಾಧಿಕಾರಿಗಳು ಏನನ್ನೂ ಹೇಳುವ ಮೊದಲೇ ತನಿಖಾ ವರದಿಗಳ ಹೆಸರಲ್ಲಿ ಸುಳ್ಳಿನ ಕಂತೆಗಳನ್ನು ಪ್ರಕಟಿಸಿದ್ದ ಕನ್ನಡ ಪತ್ರಿಕೆಗಳನ್ನು ಈಗ ಗಮನಿಸಿದವರಿಗೆ ಮಾತ್ರ ಭಾರೀ ಆಘಾತ ಕಾದಿತ್ತು. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ನಿರ್ದೇಶಕರು ದೇಶವನ್ನೇ ತಲ್ಲಣಗೊಳಿಸಿದ ಹಾಗು ಬೆಂಗಳೂರು ಲಘು ಸ್ಫೋಟ ಪ್ರಕರಣಗಳಿಗೆ ಹೋಲಿಸಿದರೆ ಭಾರೀ ದೊಡ್ಡ ಪ್ರಮಾಣದ ಎರಡು ಸ್ಫೋಟ ಪ್ರಕರಣಗಳ ಕುರಿತು ಅಧಿಕೃತವಾಗಿ ನೀಡಿದ ಮಾಹಿತಿ ಕನ್ನಡದ ಯಾವ ಪತ್ರಿಕೆಗಳಲ್ಲೂ ವರದಿಯಾಗಲೇ ಇಲ್ಲ. ಕನ್ನಡದ ಓದುಗರಿಗೆ ಇಷ್ಟು ದೊಡ್ಡ ಮೋಸ ಮಾಡಲು ಈ ಯಾವುದೇ ತನಿಖಾ ನಿಪುಣ ಪತ್ರಿಕೆಗಳು ಹಿಂಜರಿಯಲಿಲ್ಲ.



ಈ ಮಹತ್ವದ ಮಾಹಿತಿಯನ್ನು ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿ ಕನ್ನಡದ ಓದುಗರಿಗೆ ತಲುಪಿಸಿದ್ದು ವಾರ್ತಾಭಾರತಿ ಕನ್ನಡ ದಿನಪತ್ರಿಕೆ ಮಾತ್ರ.