2ಜಿ ಹಗರಣದಲ್ಲಿ 700ಕೋಟಿ ರೂ.ಲಂಚ ಪಡೆದ ಆರೋಪ ಎದುರಿಸುತ್ತಿರುವ ಕೇಂದ್ರದ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಗುರುವಾರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸುದ್ದಿ ಇಂದಿನ ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟದ ಲೀಡ್ ನ್ಯೂಸ್. ಆದರೆ ದಯಾನಿಧಿ ಮಾರನ್ ಇಂತಹದೊಂದು ರಾಡಿಯಲ್ಲಿ ಸಿಲುಕಿದ್ದಾರೆ ಎಂದು ಕನ್ನಡ ಓದುಗರ ಗಮನಕ್ಕೆ ಮೊದಲು ತಂದವರು ಯಾರು ? ಈ ಪ್ರಕರಣದ ಕುರಿತು ಮೊದಲು ವರದಿ ಮಾಡಿದ ಕನ್ನಡ ಪತ್ರಿಕೆ ಯಾವುದು ?
ಶುಕ್ರವಾರದ ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ದಯಾನಿಧಿ ಮಾರನ್ ಎಂಬ ಶೀರ್ಷಿಕೆಯಲ್ಲಿ ದಯಾನಿಧಿ ಮಾರನ್ ರಾಜೀನಾಮೆ ನೀಡಿದ ಸುದ್ದಿ ಪ್ರಕಟವಾಗಿದೆ. ಅದರಲ್ಲಿರುವ ಬಾಕ್ಸ್ ಐಟಮೊಂದು ಹೀಗಿದೆ. ''ಮೇ.30ರಂದೇ ಉದಯವಾಣಿ ವರದಿ ಮಾಡಿತ್ತು '' ಎಂಬ ಶೀರ್ಷಿಕೆಯಿರುವ ಈ ಬಾಕ್ಸ್ ಐಟಂನಲ್ಲಿ ದಯಾನಿಧಿ ಹಗರಣದ ಕುರಿತು ಪ್ರಕಟವಾದ ವರದಿಯಿರುವ ಉದಯವಾಣಿಯ ಮೇ.30,2011ರ ಸಂಚಿಕೆಯ ಮುಖಪುಟದ ಚಿತ್ರವಿದೆ. ಜೊತೆಗೆ ''ಹಗರಣದಲ್ಲಿ ದಯಾನಿಧಿ ಭಾಗಿಯಾಗಿರುವ ಕುರಿತು ಉದಯವಾಣಿ ಮೇ.30ರಂದೇ ವರದಿ ಮಾಡಿತ್ತು. ಈ ವರದಿ ಮಾಡಿದ ಮೊದಲ ಕನ್ನಡ ದಿನಪತ್ರಿಕೆ ಉದಯವಾಣಿ '' ಎಂಬ ಒಕ್ಕಣೆಯಿದೆ.
ಶುಕ್ರವಾರದ ವಾರ್ತಾಭಾರತಿ ದೈನಿಕದ ಮುಖಪುಟದಲ್ಲೂ ರಾಜಾನ ಸೆರೆಮನೆಯತ್ತ ಮಾರನ್ ಎಂಬ ಶೀರ್ಷಿಕೆಯಲ್ಲಿ ದಯಾನಿಧಿ ರಾಜೀನಾಮೆ ಲೀಡ್ ಸುದ್ದಿಯಾಗಿದೆ. ಈ ಸುದ್ದಿಯಲ್ಲೊಂದು ಬಾಕ್ಸ್ ಐಟಂ ಇದೆ. ''20ಸಾವಿರ ಕೋಟಿ ದಯಾನಿಧಿ '' ಎಂಬ ಶೀರ್ಷಿಕೆಯಲ್ಲಿ ಮೇ 28,2011ರ ವಾರ್ತಾಭಾರತಿಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿಯ ಚಿತ್ರವಿರುವ ಈ ಬಾಕ್ಸ್ ನಲ್ಲಿ ''ಬೊಕ್ಕಸಕ್ಕೆ 20ಸಾವಿರ ಕೋಟಿ ರೂ.ನಷ್ಟ ಉಂಟುಮಾಡಿ ದಯಾನಿಧಿ ಮಾರನ್ ತನ್ನ ಕುಟುಂಬದ ಒಡೆತನದ ಕಂಪೆನಿಗೆ ಅಕ್ರಮವಾಗಿ 700ಕೋಟಿ ರೂ.ಬಂಡವಾಳ ಪಡೆದಿರುವ ಬಗ್ಗೆ ತೆಹೆಲ್ಕಾ ವರದಿಯನ್ನು ಆಧರಿಸಿ ಮೇ.28,2011ರಂದು ವಾರ್ತಾಭಾರತಿಯ ಮುಖಪುಟದಲ್ಲಿ ವರದಿ ಪ್ರಕಟಿಸಿದೆ. ಈ ಪ್ರಮುಖ ವರದಿ ಪ್ರಕಟಿಸಿದ ಮೊದಲ ಕನ್ನಡ ದೈನಿಕ ವಾರ್ತಾಭಾರತಿ'' ಎಂದು ವಿವರವಿದೆ.
ಹಾಗಾದರೆ ನೀವೇ ಹೇಳಿ, ದಯಾನಿಧಿ ಮಾರನ್ ಹಗರಣದ ಕುರಿತು ಮೊದಲು ವರದಿ ಪ್ರಕಟಿಸಿದ ಕನ್ನಡ ದಿನಪತ್ರಿಕೆ ಯಾವುದು ?
No comments:
Post a Comment