-->

Thursday, May 26, 2011

ಇವರ ಪತ್ರಿಕಾ ಧಮ್ಮಕ್ಕೆ ಏನಾಗಿದೆ ?

ಮೇ 24 2011ರಂದು ಉಡುಪಿಯಲ್ಲಿ ನಡೆದ ಬೃಹತ್ ಸಮಾವೇಶವೊಂದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಬೌದ್ಧ ಭಿಕ್ಕು ಮನೋರಖ್ಖಿತ ಭಂತೇಜಿ ಅವರ ನೇತೃತ್ವದಲ್ಲಿ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದ ದಲಿತರು ಇನ್ನು ಮುಂದೆ 33ಕೋಟಿ ದೇವರನ್ನು ನಂಬುವುದಿಲ್ಲ. ಮದುವೆ, ಶುಭ ಕಾರ್ಯಗಳಿಗೆ ಬ್ರಾಹ್ಮಣರಿಂದ ಪೂಜೆ ಮಾಡಿಸುವುದಿಲ್ಲ ಎಂದೂ ಘೋಷಿಸಿದರು. ಜೊತೆಗೆ ತಮ್ಮ ಬೌದ್ಧ ಧರ್ಮ ದೀಕ್ಷೆಗೆ ವಿರೋಧ ವ್ಯಕ್ತಪಡಿಸಿ ವೈಷ್ಣವ ದೀಕ್ಷೆಯ ಆಫರ್ ಕೊಟ್ಟಿದ್ದ ಉಡುಪಿಯ ಪೇಜಾವರ ಶ್ರೀಗಳೇ ಬೌದ್ಧ ಧರ್ಮ ಸ್ವೀಕರಿಸಲಿ ಎಂದು ಅವರಿಗೆ ಸವಾಲು ಹಾಕಿದರು.

ಈ ಎಲ್ಲ ಕಾರಣಗಳಿಂದ ಇದು ಇಡೀ ರಾಜ್ಯದ ಜನರ ಗಮನ ಸೆಳಯಬೇಕಾದ ಅತ್ಯಂತ ಪ್ರಮುಖ ಸುದ್ದಿಯಾಗಿತ್ತು. ಆದರೆ ವಾರ್ತಾಭಾರತಿ ದಿನಪತ್ರಿಕೆ ಹೊರತು ಪಡಿಸಿದರೆ ಬೇರ ಯಾವುದೇ ಪತ್ರಿಕೆಗಳಿಗೆ ಇದು ಕನಿಷ್ಟ ಮುಖಪಟದಲ್ಲಿ ಹಾಕಬೇಕಾದ ಸುದ್ದಿ ಎಂದೂ ಅನಿಸಲಿಲ್ಲ. ಪ್ರಜಾವಾಣಿ ಹಾಗು ಕನ್ನಡ ಪ್ರಭ ಪತ್ರಿಕೆಗಳು ಈ ಮಹತ್ವದ ಸುದ್ದಿಯನ್ನು ಮೂರನೇ ಪುಟದಲ್ಲಿ ಕೇವಲ ಎರಡು ಕಾಲಂಗಳಲ್ಲಿ ಮುಗಿಸಿದರೆ, ಸಂಯುಕ್ತ ಕರ್ನಾಟಕ ಮೂರನೇ ಪುಟದಲ್ಲಿ ಈ ಸುದ್ದಿಯನ್ನು ಮೂರು ಕಾಲಂನಲ್ಲಿ ಹಾಕುವ ಔದಾರ್ಯ ತೋರಿತು.ವಿಜಯ ಕರ್ನಾಟಕ 5ನೆ ಪುಟದಲ್ಲಿ ಮೂರು ಕಾಲಂ ಸುದ್ದಿ ಹಾಕಿ ಕೈತೊಳೆದುಕೊಂಡಿತು. 

ಇನ್ನು ಈ ಸುದ್ದಿಯನ್ನು ಪ್ರಕಟಿಸಿಯೂ ಸತ್ಯವನ್ನು ಮುಚ್ಚಿಟ್ಟ, ಕಾಟಾಚಾರದ ಹಾಗು ಮೋಸದ ವರದಿಗಾರಿಕೆ ಮಾಡಿದ ಶ್ರೇಯಸ್ಸು ಖಂಡಿತವಾಗಿ ಉದಯವಾಣಿ ಹಾಗು ಪ್ರಜಾವಾಣಿ ಪತ್ರಿಕೆಗಳಿಗೆ ಸಲ್ಲಲೇಬೇಕು. ತನ್ನ 12ನೆ ಪುಟದಲ್ಲಿ 'ಅಂತರಂಗದ ಕಣ್ಣು ತೆರೆದಾಗ ಜ್ಞಾನೋದಯ' ಎಂಬ ಶೀರ್ಷಿಕೆ ಹಾಗು 'ಧಮ್ಮ ದೀಕ್ಷೆ ಬೌದ್ಧ ಸಮಾವೇಶದಲ್ಲಿ ಮನೋರಖ್ಖಿತ ಭಂತೇಜಿ' ಎಂಬ ಉಪಶೀರ್ಷಿಕೆಯಲ್ಲಿ ನಾಲ್ಕು ಕಾಲಂನ ಫೋಟೋ ಸಹಿತ ವರದಿ ಪ್ರಕಟಿಸಿದೆ ಉದಯವಾಣಿ. ಆದರೆ ಇಡೀ ವರದಿಯಲ್ಲಿ ಎಲ್ಲೂ ಈ ಕಾರ್ಯಕ್ರಮದಲ್ಲಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದರು ಎಂಬುದು ಮಾತ್ರ ತಪ್ಪಿಯೂ ಉಲ್ಲೇಖವಾಗಲೇ ಇಲ್ಲ್ಲ !

ಇನ್ನು ಪ್ರಜಾವಾಣಿ. ಆ ಪತ್ರಿಕೆಯ ಮೂರನೇ ಪುಟದಲ್ಲಿ 'ಧರ್ಮವನ್ನು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ನೋಡದಿರಿ' ಎಂಬ ಶೀರ್ಷಿಕೆಯಲ್ಲಿ ಉಡುಪಿ ಸಮಾವೇಶದ ವರದಿ ಪ್ರಕಟವಾಗಿದೆ. ಆದರೆ ವಿಪರ್ಯಾಸ ನೋಡಿ. ಇದರಲ್ಲೂ ಆ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದ ವಿಷಯವೇ ವರದಿಯಾಗಿಲ್ಲ. ಉದಯವಾಣಿಯಲ್ಲಿ ಉಡುಪಿ ಸಮಾವೇಶವನ್ನು ೞಧಮ್ಮ ದೀಕ್ಷೆ ಹಾಗು ಬೌದ್ಧ ಸಮಾವೇಶ ೞಕಾರ್ಯಕ್ರಮ ಎಂದಾದರೂ ಬರೆಯುವ ಸೌಜನ್ಯ ತೋರಿಸಿದ್ದರೆ ಪ್ರಜಾವಾಣಿಯ ವರದಿಯಲ್ಲಿ ಆ ಕಾರ್ಯಕ್ರಮವನ್ನು ಬೌದ್ಧ ಸಮಾವೇಶ ಎಂದು ಮಾತ್ರ ಬರೆಯಲಾಗಿದೆ.ಪೇಜಾವಾರ ಸ್ವಾಮೀಜಿಗಳಿಗೆ, ಬ್ರಾಹ್ಮಣ್ಯಕ್ಕೆ ಸವಾಲು ಹಾಕುವ ದಲಿತರು ಬೌದ್ಧ ಧಮ್ಮ ದೀಕ್ಷೆ ಕಾರ್ಯಕ್ರಮದ ಕುರಿತು ಉದಯವಾಣಿಯ ಅಲರ್ಜಿ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಪ್ರಜಾವಾಣಿಯ ಪತ್ರಿಕಾ ಧರ್ಮವನ್ನು ನೇಣಿಗೇರಿಸಿರುವ ಜನಿವಾರ ಯಾವುದು ಎಂಬುದು ಮಾತ್ರ ನಿಗೂಢ ನಿಗೂಢ !!

ಅಂದ ಹಾಗೆ ಉಳಿದ ಎಲ್ಲ ಕನ್ನಡ ಪತ್ರಿಕೆಗಳು ಈ ಸಮಾವೇಶದ ವರದಿಯನ್ನು ಪ್ರಕಟಿಸಿರುವುದು ತಮ್ಮ ಮಂಗಳೂರು ಆವೃತ್ತಿಯಲ್ಲಿ ಮಾತ್ರ. ಈ ಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಪ್ರಮುಖ ಕಾರ್ಯಕ್ರಮದ ಕುರಿತು ಒಂದಕ್ಷರದ ಸುದ್ದಿಯೂ ಪ್ರಕಟವಾಗಿಲ್ಲ. ತನ್ನ ಎಲ್ಲ ಆವೃತ್ತಿಗಳಲ್ಲೂ (ಮಂಗಳೂರು ಹಾಗು ಬೆಂಗಳೂರು) ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ ಧಮ್ಮ ದೀಕ್ಷೆಯ ವರದಿಯನ್ನು ಫೋಟೋ ಸಹಿತ ಪ್ರಕಟಿಸಿದ್ದು ವಾರ್ತಾಭಾರತಿ ಮಾತ್ರ.