-->

Sunday, April 24, 2011

ಕನ್ನಡ ಪತ್ರಿಕೆಗಳು ಕೇಸರಿ ಕನ್ನಡಕ ಕಳಚಿಡುವುದು ಯಾವಾಗ ?

2002ರ ಗುಜರಾತ್ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗು ಅವರ ನೇತೃತ್ವದ ರಾಜ್ಯ ಸರಕಾರದ ನೇರ ಪಾತ್ರವಿತ್ತು ಎಂಬುದನ್ನು ಸಾಮಾನ್ಯ ಜ್ಞಾನ ಇರುವ ಯಾರೂ ಒಪ್ಪುವ ವಿಷಯ. ಆದರೆ ಆ ಸರಕಾರದ ಅಧೀನದಲ್ಲಿ ಇನ್ನೂ ಸೇವೆಯಲ್ಲಿರುವ ಓರ್ವ ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿಯೇ ಹತ್ಯಾಕಾಂಡ ನಡೆಯಲು ಮೋದಿ ಪ್ರಚೋದನೆಯೇ ಕಾರಣ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡಿರುವುದು ಅತ್ಯಂತ ಮಹತ್ವದ ಬೆಳವಣಿಗೆ .

ಮೋದಿ ವಿರುದ್ಧ ಅಫಿದಾವಿತ್ ಸಲ್ಲಿಸಿರುವವರು ಸಾಮಾನ್ಯ ಪೊಲೀಸ್ ಅಧಿಕಾರಿಯಲ್ಲ. ನಿವೃತ್ತ ಅಧಿಕಾರಿಯೂ ಅಲ್ಲ. 2002ರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಗುಜರಾತಿನ ಗುಪ್ತಚರ ವಿಭಾಗದ ಡಿಸಿಪಿ (ಉಪಾಯುಕ್ತ) ರಾಗಿದ್ದವರು ಸಂಜೀವ ಭಟ್. ಗುಪ್ತಚರ ವಿಭಾಗದಲ್ಲಿ ಮಹತ್ವದ ಹುದ್ದೆಯಲ್ಲಿರುವವರಿಗೆ ಸಹಜವಾಗಿಯೇ ರಾಜ್ಯದ ಆಗುಹೋಗುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದಿರುತ್ತದೆ. ಸಾಲದ್ದಕ್ಕೆ ಫೆಬ್ರವರಿ 27,2002ರಂದು ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆಸಿದ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿಯೂ ತಾನು ಹಾಜರಿದ್ದೆನೆಂದು ಸಂಜೀವ್ ಭಟ್ ಹೇಳಿದ್ದಾರೆ. ಆ ಸಭೆಗೆ ಅವರನ್ನು ನಾನೇ ಬಿಟ್ಟು ಬಂದೆ ಎಂದು ಅವರ ಚಾಲಕ ಕೂಡ ಹೇಳಿಕೆ ನೀಡಿದ್ದಾನೆ. ಆದ್ದರಿಂದ ಆ ಸಭೆಯಲ್ಲಿ ಮೋದಿ ಏನು ಹೇಳಿದ್ದರೆಂಬ ಕುರಿತು ಸಂಜೀವ್ ಭಟ್ ನೀಡಿರುವ ಮಾಹಿತಿಗೆ ಭಾರೀ ಮಹತ್ವವಿದೆ. ಸುಮಾರು ಎರಡು ಸಾವಿರ ಮಂದಿಯ ಮಾರಣ ಹೋಮ  ಹಿಂದಿನ ಸತ್ಯ ಸಂಜೀವ್ ಭಟ್‌ರ ಸಾಕ್ಷದ ಮೂಲಕ ಹೊರಬಿದ್ದಿದೆ.
 

ರಾಜ್ಯದ ಮುಖ್ಯಮಂತ್ರಿಯೇ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯದವರು ಸಿಟ್ಟು ತೀರಿಸಿಕೊಳ್ಳಲು ಬಿಟ್ಟು ಬಿಡಿ. ಅವರಿಗೆ ಪಾಠ ಕಲಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು ಎಂದು ಸಂಜೀವ್ ಭಟ್ ಸಾಕ್ಷ ನುಡಿದಿದ್ದಾರೆ. ಅಲ್ಲಿಗೆ ಗುಜರಾತ್ ಹತ್ಯಾಕಾಂಡದ ಕುರಿತು ಎಲ್ಲ ಪ್ರಜ್ಞಾವಂತರಿಗೆ, ಜನಪರ ಸಂಘಟನಗಳಿಗೆ ಇದ್ದ ಸಂಶಯ ನಿಜವಾಗಿದೆ. ಅಭಿವೃದ್ಧಿಯ ಹರಿಕಾರನೆಂಬ ವೇಷದಲ್ಲಿರುವ ಮೋದಿಯ ನಿಜ ರೂಪವನ್ನು ಬಯಲು ಮಾಡಿದ್ದಾರೆ ಅವರದೇ ರಾಜ್ಯದ ದಿಟ್ಟ ಪೊಲೀಸ್ ಅಧಿಕಾರಿ ಸಂಜೀವ್ ಭಟ್. ಇಡೀ ಜಗತ್ತಿನೆದುರು ಮುಖವಾಡ ಕಳೆದುಕೊಂಡು ನಿಂತಿದ್ದಾರೆ ಮೋದಿ.
 

ಆದರೆ ಜಗತ್ತು ಮೇಲೆ ಕೆಳಗಾದರೂ ನಮ್ಮ ಕನ್ನಡ ಪತ್ರಿಕೆಗಳು ಹಾಕಿಕೊಂಡ ಕೇಸರಿ ಕನ್ನಡಕದಲ್ಲಿ ಅದು ಅವುಗಳಿಗೆ ಕಾಣುವುದೇ ಇಲ್ಲ. ಮೋದಿ ವಿರುದ್ಧ ಸಂಜೀವ್ ಭಟ್ ನೀಡಿರುವ ಸಾಕ್ಷ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.  ಶನಿವಾರ (ಫೆಬ್ರವರಿ 23, 2011)ದ ಎಲ್ಲ ರಾಷ್ಟ್ರಮಟ್ಟದ ಇಂಗ್ಲೀಷ್ ದೈನಿಕಗಳಲ್ಲಿ ಮುಖಪುಟದ ಲೀಡ್ ಸುದ್ದಿ ಅಥವಾ ಪ್ರಮುಖ ಸುದ್ದಿ ಸಂಜೀವ್ ಭಟ್‌ರ ಹೇಳಿಕೆ.
ಆದರೆ ಸದಾ ಮೋದಿಯ ಬಹುಪರಾಕ್ ಹಾಡುವ ಕನ್ನಡದ ಪತ್ರಿಕೆಗಳಿಗೆ ಇಷ್ಟೊಂದು ದೊಡ್ಡ ಸುದ್ದಿ ಮುಖಪುಟದಲ್ಲಿ ಲೀಡ್ ಆಗದಿದ್ದರೂ, ಪ್ರಮುಖ ಸುದ್ದಿಯಾಗಿ ಪ್ರಕಟವಾಗಬೇಕೆಂದು ಅನಿಸಲೇ ಇಲ್ಲ. ಪ್ರಜಾವಾಣಿ ಸಹಿತ ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ ಹಾಗು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಈ ಸುದ್ದಿಯನ್ನು ಒಲ್ಲದ ಮನಸ್ಸಿನಿಂದ ಪ್ರಕಟಿಸಿವೆ.  ವಿಜಯ ಕರ್ನಾಟಕ ಮುಖಪುಟದಲ್ಲಿ ಒಂದು ಪ್ಯಾರಾದ ಸುದ್ದಿ ಪ್ರಕಟಿಸುವ ಕೃಪೆ ತೋರಿದರೆ ಉಳಿದ ಕನ್ನಡ ಪತ್ರಿಕೆಗಳು ಈ ಸುದ್ದಿಯನ್ನು ಮುಲಾಜಿಲ್ಲದೆ ಒಳಗಿನ ಪುಟಕ್ಕೆ ದೂಡಿಬಿಟ್ಟಿವೆ.
 

ಈ ಸುದ್ದಿಯನ್ನು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ ಪ್ರಕಟಿಸಿದ ಏಕೈಕ ಕನ್ನಡ ಪತ್ರಿಕೆ ವಾರ್ತಾಭಾರತಿ. ಈ ಹಿಂದೆ ಸಂಜೀವ್ ಭಟ್ ವಿಶೇಷ ತನಿಖಾ ತಂಡದೆದುರು ಇದೇ ಹೇಳಿಕೆಯನ್ನು ನೀಡಿದ್ದಾಗಲೂ ವಾರ್ತಾಭಾರತಿ ಆ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿತ್ತು.