-->

Sunday, February 6, 2011

ರೈತರು ಆತ್ಮಹತ್ಯೆ ಮಾಡಿದರೆ ಇವರಿಗೆ ಸುದ್ದಿಯೇ ಅಲ್ಲ !

ಶುಕ್ರವಾರ ಇಡೀ ನಾಡು ರಾಜಧಾನಿಯಲ್ಲಿ ನಡೆಯುತ್ತಿದ್ದ ವಾರ್ಷಿಕ ನುಡಿ ಸಂಭ್ರಮವನ್ನು ನೋಡಿ ಖುಷಿ ಪಡುತ್ತಿದ್ದರೆ ಗುಲ್ಬರ್ಗದಲ್ಲಿ ನಮ್ಮ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದರು. ಅವರು ಬೆಳೆದ ತೊಗರಿಗೆ ಸರಕಾರ ಬೆಂಬಲ ಬೆಲೆ ನೀಡಲು ಒಪ್ಪದೆ ಅವರು ಬೀದಿಪಾಲಾಗುವ ಪರಿಸ್ಥಿತಿ ಬಂದಿತ್ತು. ಆದ್ದರಿಂದ ಉಪವಾಸ ಸತ್ಯಾಗ್ರಹ ಕೈಗೊಂಡರೂ ಸರಕಾರ ಗಮನ ಹರಿಸಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ರೈತರು ವಿಷ ಸೇವಿಸಿ ಪ್ರಾಣ ಬಿಡಲು ಮುಂದಾದರು. ಈ ಪೈಕಿ ಐವರು ರೈತರ ಪರಿಸ್ಥಿತಿ ಗಂಭೀರವಾಯಿತು.

ಇಲ್ಲಿ ನೇಗಿಲಯೋಗಿ..... ಎಂದು ಹಾಡಿ ರಾಜ್ಯದ ಜನರು ಸಾಹಿತ್ಯ ಸಂಭ್ರಮದಲ್ಲಿರುವಾಗ ನಮ್ಮ ರೈತರು ಸಾಮೂಹಿಕವಾಗಿ ಆತ್ಮಹತ್ಯೆಗೆ ಮುಂದಾಗಿರುವ ಪರಿಸ್ಥಿತಿ ಬಂದಿರುವುದು ನಮ್ಮ ರಾಜ್ಯದ ದುರಂತ. ಆದರೆ ಅದಕ್ಕಿಂತ ದೊಡ್ಡ ದುರಂತ ನೋಡಿ. ಇಷ್ಟು ದೊಡ್ಡ ದುರ್ಘಟನೆ ಸಂಭವಿಸಿದರೆ ಅದನ್ನು ವರದಿ ಮಾಡಲು ಮನಸ್ಸಾಗದ ಪತ್ರಿಕೆಗಳೂ ನಮ್ಮ ರಾಜ್ಯದಲ್ಲಿವೆ ಎಂಬುದು ಅದಕ್ಕಿಂತ ದೊಡ್ಡ ದುರಂತವಲ್ಲವೇ ?

ಕನ್ನಡ ಪತ್ರಿಕೆಗಳಿಗೆ ಹಿರಿಯಣ್ಣನ ಸ್ಥಾನದಲ್ಲಿರುವ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಹಾಗು ತನ್ನನ್ನು ೞಓದುಗರು ರೂಪಿಸಿದ ನೇತಾರೞಎಂದು ಘೋಷಿಸಿಕೊಂಡಿರುವ ಉದಯವಾಣಿ -ಈ ಎರಡೂ ದಿನಪತ್ರಿಕೆಗಳಿಗೆ ರೈತರು ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸುದ್ದಿಯಾಗಬೇಕಾದ ವಿಷಯ ಎಂದು ಅನಿಸಲೇ ಇಲ್ಲ ! ಇವರದ್ದು ಎಂತಹ ಘನ ಪತ್ರಿಕೋದ್ಯಮವಾಗಿರಬಹುದು?

ವಿಜಯ ಕರ್ನಾಟಕ ಮುಖಪುಟದಲ್ಲಿ ಕೇವಲ ಒಂದು ಪ್ಯಾರಾ ಸುದ್ದಿ ಹಾಕಿದರೂ 7ನೇ ಪುಟದಲ್ಲಿ ಆ ವಿಷಯದ ಕುರಿತು ಮತ್ತೆ ಎರಡು ಕಾಲಂನ ವರದಿ ಪ್ರಕಟಿಸಲು ಮನಸ್ಸು ಮಾಡಿತು. ಪ್ರಜಾವಾಣಿ ಮುಖಪುಟದಲ್ಲಿ ಒಂದು ಕಾಲಂ ಸುದ್ದಿ ಹಾಕಿ ಮುಗಿಸಿತು. ಕನ್ನಡ ಪ್ರಭ 15ನೇ ಪುಟದಲ್ಲಾದರೂ ವಿವರವಾಗಿಯೇ ಈ ಸುದ್ದಿಯನ್ನು ಪ್ರಕಟಿಸಿತು.

ಸಾಹಿತ್ಯ ಸಮ್ಮೇಳನದ ಸುದ್ದಿ ಭರಾಟೆಯ ನಡುವೆಯೂ ರೈತರ ಆತ್ಮಹತ್ಯೆಯ ಸುದ್ದಿಗೆ ಸೂಕ್ತ ಪ್ರಾಮುಖ್ಯತೆ ನೀಡಿ ಮುಖಪುಟದಲ್ಲೇ ವಿವರವಾಗಿ ಅದನ್ನು ಪ್ರಕಟಿಸಿ ಕನ್ನಡಿಗರ ಗಮನ ಸೆಳೆದಿದ್ದು ವಾರ್ತಾಭಾರತಿ ದಿನಪತ್ರಿಕೆ. ಜೊತೆಗೆ ಶನಿವಾರದ ತನ್ನ ಸಂಪಾದಕೀಯದಲ್ಲೂ ಈ ವಿಷಯವನ್ನು ಉಲ್ಲೇಖಿಸಿದೆ ವಾರ್ತಾಭಾರತಿ.

No comments:

Post a Comment