2002ರ ಗುಜರಾತ್ ಹತ್ಯಾಕಾಂಡದ ಕುರಿತ ಕಹಿಸತ್ಯವನ್ನು ನ್ಯಾಯಾಲಯಕ್ಕೆ ಹೇಳುವ ಮೂಲಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಎದುರು ಹಾಕಿಕೊಂಡಿರುವ ಸಂಜೀವ್ ಭಟ್ ಈಗ ಸುದ್ದಿಯಲ್ಲಿದ್ದಾರೆ. ಸತ್ಯ ಹೇಳಿದ ತಪ್ಪಿಗೆ ಗುಜರಾತ ಸರಕಾರ ಮೊದಲು ಅವರನ್ನು ಪಿಳ್ಳೆ ನೆವ ಹೇಳಿ ಅಮಾನತು ಮಾಡಿತು. ಬಳಿಕ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದೆ.
ರಾಜ್ಯದಲ್ಲಿ ಹಲವು ವರ್ಷ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪೊಲೀಸ್ ಅಧಿಕಾರಿ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೆ ಪೊಲೀಸ್ ಕಸ್ಟಡಿಯಲ್ಲಿ ಅವರನ್ನು ಅತ್ಯಂತ ಕೆಟ್ಟದಾಗಿ ನೋಡಿಕೊಳ್ಳಲಾಗಿದೆ ಹಾಗು ಅವರ ಜೀವಕ್ಕೆ ಅಪಾಯವಿದೆ ಎಂದು ಅವರ ಪತ್ನಿ ಶ್ವೇತಾ ಭಟ್ ಕೇಂದ್ರ ಸರಕಾರಕ್ಕೆ ಎರಡೆರಡು ಬಾರಿ ಪತ್ರ ಬರೆದಿದ್ದಾರೆ. ಗುಜರಾತ್‌ನ ಹಿರಿಯಧಿಕಾರಿಗಳಿಗೆ ನೀಡಿದ ಮನವಿಯಿಂದ ಏನೂ ಪ್ರಯೋಜನವಾಗದ ಬಳಿಕ ಶ್ವೇತಾ ಕೇಂದ್ರದ ಮೊರೆ ಹೋಗಿದ್ದರು. ಈ ನಡುವೆ ಗುಜರಾತ್ ಸರಕಾರದೊಂದಿಗೆ ರಾಜಿ ಮಾಡಿಕೊಳ್ಳುವುದಾದರೆ ನಿಮ್ಮನ್ನು ತಕ್ಷಣ ಬಿಡುಗಡೆ ಮಾಡುತ್ತೇವೆ ಎಂದು ಅಲ್ಲಿನ ನ್ಯಾಯಾಧೀಶರೇ ಸಂಜೀವ್‌ರಿಗೆ ಒಡ್ಡಿದ ಆಮಿಶವನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇದು ಸಿದ್ಧಾಂತದ ಹೋರಾಟವಾದ್ದರಿಂದ ನಾನು ಜೈಲಿನಲ್ಲೇ ಇರಲು ಸಿದ್ಧ ಎಂದು ಹೇಳುವ ಮೂಲಕ ಮೋದಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ತಮ್ಮ ಹಿರಿಯ ಸಹೋದ್ಯೋಗಿಯನ್ನು ಸರಕಾರ ನಡೆಸಿಕೊಂಡ ರೀತಿಯನ್ನು ನೋಡಿದ ಅಲ್ಲಿನ ಐಪಿಎಸ್ ಅಧಿಕಾರಿಗಳೆಲ್ಲ ಈಗ ಒಗ್ಗಟ್ಟಾಗಿದ್ದಾರೆ. ರವಿವಾರ ಸಭೆ ಸೇರಿದ ಗುಜರಾತ್‌ನ ಐಪಿಎಸ್ ಅಧಿಕಾರಿಗಳ ಸಂಘವು ಸಂಜೀವ್ ಭಟ್‌ರನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದೆ. ಸಂಜೀವ್ ಬಂಧನದ ಕುರಿತು ತಮ್ಮ ತಕರಾರಿಲ್ಲ. ಆದರೆ ಅವರನ್ನು ಬಂಧನದ ಬಳಿಕ ನಡೆಸಿಕೊಂಡ ರೀತಿ ಸರಿಯಲ್ಲ. ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿರುವ ಐಪಿಎಸ್ ಅಧಿಕಾರಿಗಳು ರವಿವಾರ ಸಂಜೀವ್ ಭಟ್‌ರ ಮನೆಗೂ ಹೋಗಿ ಅವರ ಪತ್ನಿಗೆ ತಮ್ಮ ನಿಲುವನ್ನು ತಿಳಿಸಿ ಬೆಂಬಲ ಸೂಚಿಸಿ ಬಂದಿದ್ದಾರೆ.
ಗುಜರಾತ್‌ನ ಐಪಿಎಸ್ ಅಧಿಕಾರಿಗಳು ತೆಗೆದುಕೊಂಡಿರುವ ಈ ನಿರ್ಧಾರ ಅತ್ಯಂತ ಮಹತ್ವದ್ದು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಪೊಲೀಸರ ಪರೋಕ್ಷ ಸಹಕಾರದಿಂದಲೇ ದೊಡ್ಡ ಸಂಖ್ಯೆಯಲ್ಲಿ ಅಮಾಯಕರು ಬಲಿಯಾಗುವಂತಾಯಿತು ಎಂಬುದು ಎಲ್ಲ ಮಾನವ ಹಕ್ಕು ಸಂಘಟನೆಗಳು ಹಾಗು ಕಾರ್ಯಕರ್ತರ ದೂರು. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರಕ್ಕೆ ತಲೆನೋವು ತರಬಲ್ಲ ಸತ್ಯಗಳು ಬೆಳಕಿಗೆ ಬಾರದಂತೆ ಮಾಡುವಲ್ಲೂ ಪೊಲೀಸರ ಪಾತ್ರ ಬಹಳ ದೊಡ್ಡದು. ಈ ಎಲ್ಲ ವರ್ಷಗಳಲ್ಲಿ ನರೇಂದ್ರ ಮೋದಿಗೆ ಅಲ್ಲಿನ ಬಹುತೇಕ ಪೊಲೀಸ್ ಅಧಿಕಾರಿಗಳು ಅದರಲ್ಲೂ ಐಪಿಎಸ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಲೇ ಬಂದಿದ್ದಾರೆ. ಅಧಿಕಾರಶಾಹಿ ಅದರಲ್ಲೂ ಪೊಲೀಸ್ ವ್ಯವಸ್ಥೆಯ ಬೆಂಬಲ ಯಾವುದೇ ಸರಕಾರಕ್ಕೆ ಬಹುಮುಖ್ಯ. ಹತ್ಯಾಕಾಂಡಕ್ಕೆ ಸಂಬಂಧಿಸಿ ಕಾನೂನು ಸುಳಿಯಲ್ಲಿ ಸಿಲುಕುವ ಅಪಾಯ ಎದುರಿಸುತ್ತಿರುವ ಮೋದಿಯವರಿಗಂತೂ ಪೊಲೀಸರ ಸಹಕಾರ ಅನಿವಾರ್ಯ.
ಇಂತಹ ಪರಿಸ್ಥಿತಿಯಲ್ಲಿ ಮೋದಿ ಸರಕಾರವೇ ಬಂಧಿಸಿದ ಪೊಲೀಸ ಅಧಿಕಾರಿಯ ಬೆಂಬಲಕ್ಕೆ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಒಗ್ಗಟ್ಟಾಗಿ ನಿಂತಿರುವುದು ಮೋದಿ ಪಾಲಿಗೆ ದೊಡ್ಡ ತಲೆನೋವು ತರುವ ವಿಚಾರ. ಗುಜರಾತ್ ಪೊಲೀಸರ ಒಗ್ಗಟ್ಟು ಇದೇ ರೀತಿ ಮುಂದುವರಿದರೆ ಗುಜರಾತ್ ಹತ್ಯಾಕಂಡ ಕುರಿತ ತನಿಖೆಗೂ ಮಹತ್ವದ ತಿರುವು ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಆದರೆ ಸಂಜೀವ್ ಭಟ್‌ರನ್ನು ಬೆಂಬಲಿಸುವ ಗುಜರಾತ್ ಐಪಿಎಸ್ ಅಧಿಕಾರಿಗಳ ನಿರ್ಧಾರದಿಂದ ಹೆಚ್ಚಿನ ಕನ್ನಡ ಪತ್ರಿಕೆಗಳು ಮಾತ್ರ ಭಾರೀ ಆಘಾತಗೊಂಡಂತಿದೆ. ಈ ಆಘಾತದ ಪ್ರಮಾಣ ಅದೆಷ್ಟಿದೆಯೆಂದರೆ ಆ ಸುದ್ದಿಯನ್ನೇ ಪ್ರಕಟಿಸಲು ಮರೆತು ಬಿಡುವಷ್ಟು . ಮೋದಿಗೆ ಬರಲಿರುವ ಸಂಭಾವ್ಯ ತಲೆನೋವು ಬಹುತೇಕ ಕನ್ನಡ ಪತ್ರಿಕೆಗಳ ಸಂಪಾದಕರಿಗೆ ಈಗಲೇ ಇಷ್ಟು ದೊಡ್ಡ ತಲೆನೋವಾಗಿ ಕಾಡಿರುವುದು ನಿಜಕ್ಕೂ ಕನ್ನಡ ಪತ್ರಿಕೋದ್ಯಮದ ಹಾಗು ಓದುಗರ ಪಾಲಿನ ಭಾರೀ ದುರಂತವೇ ಸರಿ. ವಿಜಯ ಕರ್ನಾಟಕ ಪತ್ರಿಕೆ ಮಾತ್ರ ಈ ಸುದ್ದಿಯನ್ನು ಒಳಗಿನ ಪುಟದಲ್ಲಿ ಪ್ರಕಟಿಸಿದ್ದು ಬಿಟ್ಟರೆ ಉಳಿದೆಲ್ಲ ಪ್ರಮುಖ ಪತ್ರಿಕೆಗಳು (ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ) ಆ ಸುದ್ದಿಯ ತಂಟೆಗೆ ಹೋಗಲಿಲ್ಲ.