-->

Friday, January 28, 2011

ಭಯೋತ್ಪಾದಕರನ್ನು ಮೀರಿಸಿದ ಪತ್ರಿಕೆಗಳು

2010ರ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಲಘು ಸ್ಪೋಟ ಪ್ರಕರಣದ ನಂತರ ಕನ್ನಡದ ಬಹುತೇಕ ಪತ್ರಿಕೆಗಳು ತೋರಿಸಿದ ಸಾಮಾಜಿಕ ಕಾಳಜಿ ಹಾಗು ತನಿಖಾ ಸಾಮರ್ಥ್ಯಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತುತಿ. ರಾಜ್ಯದ ಗೃಹ ಸಚಿವರು ಹಾಗು ಪೊಲೀಸ್ ಮಹಾ ನಿರ್ದೇಶಕರೇ ನಾಚಿಕೊಂಡು ಕೊನೆಗೆ ‘‘ ದಯಮಾಡಿ ನಮ್ಮ ಕೆಲಸ ಮಾಡಲು ನಮಗೂ ಸ್ವಲ್ಪ ಅವಕಾಶ ಕೊಡಿ ’’ ಎಂದು ಅಂಗಲಾಚಿ ಕೇಳಿಕೊಳ್ಳುವಷ್ಟು ಕ್ಷಿಪ್ರಗತಿಯಲ್ಲಿ ಇಡೀ ಪ್ರಕರಣದ ತನಿಖೆಯನ್ನು ಮುಗಿಸಿ ಅಪರಾಧಿಗಳನ್ನು ಗುರುತಿಸಿದ್ದವು ಕನ್ನಡದ ಪತ್ರಿಕೆಗಳು.

ಫೆಬ್ರವರಿ2010ರಲ್ಲಿ ಪುಣೆಯ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟಕ್ಕೂ ಬೆಂಗಳೂರು ಲಘು ಸ್ಫೋಟಗಳಿಗೂ ಸಾಮ್ಯತೆ ಇದೆ ಎಂಬ ಅಂಶ ಈ ಪತ್ರಿಕೆಗಳ ತನಿಖಾ ವರದಿಯಲ್ಲಿ ಭಾರೀ ಪ್ರಾಮುಖ್ಯತೆಯೊಂದಿಗೆ ಆಗಾಗ ಪ್ರಕಟವಾಗುತ್ತಿತ್ತು. ಪುಣೆ ಸ್ಫೋಟಕ್ಕೂ ಬೆಂಗಳೂರು ಘಟನೆಗೂ ಸಾಮ್ಯತೆಯಿಲ್ಲ, ಹಾಗು ಈ ಬಗ್ಗೆ ಈಗಲೇ ಹೇಳುವುದು ಸಾಧ್ಯವೂ ಇಲ್ಲ ಎಂದು ರಾಜ್ಯದ ಡಿಜಿಪಿಯವರೇ ಸ್ಪಷ್ಟವಾಗಿ ಹೇಳಿದ ಬಳಿಕವೂ ಈ ಸಾಮ್ಯತೆಯ ಅಂಶ ಆಗಾಗ ಕನ್ನಡ ಪತ್ರಿಕೆಗಳಲ್ಲಿ ರಾರಾಜಿಸುತ್ತಿತ್ತು.
















ಆದರೆ ವಿಪರ್ಯಾಸ ನೋಡಿ; ಕೆಲವೇ ದಿನಗಳ ಬಳಿಕ ಎಪ್ರಿಲ್30,2010ರಂದು ಅಜ್ಮೀರ್ ದರ್ಗಾ ಸ್ಫೋಟಕ್ಕೆ ಸಂಬಂಧಿಸಿ ರಾಜಸ್ತಾನದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಸಂಘಪರಿವಾರಕ್ಕೆ ಸೇರಿದ ದೇವೇಂದ್ರ ಗುಪ್ತ ಎಂಬವನನ್ನು ಹಾಗು ಆ ಬಳಿಕ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಬಂಧಿಸಿದರು. ಅಲ್ಲದೆ ಹೈದರಾಬಾದಿನ ಮಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟಕ್ಕೂ ಅಜ್ಮೀರ್ ದರ್ಗಾ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬುದನ್ನು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಹೊಸದಿಲ್ಲಿಯಲ್ಲಿ ಮೇ4,2010 ರಂದು ಬಹಿರಂಗಪಡಿಸಿದರು. ಎರಡೂ ಸ್ಫೋಟಕ್ಕೆ ಬಳಸಿದ ವಸ್ತುಗಳು ಹಾಗೂ ರೂಪುರೇಷೆಗಳಲ್ಲಿ ಸಾಮ್ಯತೆಯಿದೆ ಎಂದೂ ಅವರು ವಿವರ ನೀಡಿ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ತನಿಖಾಧಿಕಾರಿಗಳು ಏನನ್ನೂ ಹೇಳುವ ಮೊದಲೇ ತನಿಖಾ ವರದಿಗಳ ಹೆಸರಲ್ಲಿ ಸುಳ್ಳಿನ ಕಂತೆಗಳನ್ನು ಪ್ರಕಟಿಸಿದ್ದ ಕನ್ನಡ ಪತ್ರಿಕೆಗಳನ್ನು ಈಗ ಗಮನಿಸಿದವರಿಗೆ ಮಾತ್ರ ಭಾರೀ ಆಘಾತ ಕಾದಿತ್ತು. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ನಿರ್ದೇಶಕರು ದೇಶವನ್ನೇ ತಲ್ಲಣಗೊಳಿಸಿದ ಹಾಗು ಬೆಂಗಳೂರು ಲಘು ಸ್ಫೋಟ ಪ್ರಕರಣಗಳಿಗೆ ಹೋಲಿಸಿದರೆ ಭಾರೀ ದೊಡ್ಡ ಪ್ರಮಾಣದ ಎರಡು ಸ್ಫೋಟ ಪ್ರಕರಣಗಳ ಕುರಿತು ಅಧಿಕೃತವಾಗಿ ನೀಡಿದ ಮಾಹಿತಿ ಕನ್ನಡದ ಯಾವ ಪತ್ರಿಕೆಗಳಲ್ಲೂ ವರದಿಯಾಗಲೇ ಇಲ್ಲ. ಕನ್ನಡದ ಓದುಗರಿಗೆ ಇಷ್ಟು ದೊಡ್ಡ ಮೋಸ ಮಾಡಲು ಈ ಯಾವುದೇ ತನಿಖಾ ನಿಪುಣ ಪತ್ರಿಕೆಗಳು ಹಿಂಜರಿಯಲಿಲ್ಲ.



ಈ ಮಹತ್ವದ ಮಾಹಿತಿಯನ್ನು ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿ ಕನ್ನಡದ ಓದುಗರಿಗೆ ತಲುಪಿಸಿದ್ದು ವಾರ್ತಾಭಾರತಿ ಕನ್ನಡ ದಿನಪತ್ರಿಕೆ ಮಾತ್ರ.



Friday, January 21, 2011

ಭಯೋತ್ಪಾದನೆ ಯಾರು ಮಾಡಿದ್ದು ಎಂಬುದನ್ನು ಅವಲಂಬಿಸಿ ಅದರ ಭಯಾನಕತೆ ನಿರ್ಧಾರವಾಗುತ್ತದೆಯೇ ?
ಕೆಲವು ಕನ್ನಡ ಪತ್ರಿಕೆಗಳ ಸಂಪಾದಕರಲ್ಲಿ ಕೇಳಿದರೆ ಇದಕ್ಕೆ ಉತ್ತರ - ಹೌದು !

ಹುಬ್ಬಳ್ಳಿ ನ್ಯಾಯಾಲಯ ಸ್ಫೋಟದ ಬಗ್ಗೆ ಉದಯವಾಣಿ ಹಾಗು ವಿಜಯ ಕರ್ನಾಟಕ ಪತ್ರಿಕೆಗಳು ಪ್ರಕಟಿಸಿದ ವರದಿಗಳ ಕೆಲವು ಸ್ಯಾಂಪಲ್‌ಗಳು ಇಲ್ಲಿವೆ. ನ್ಯಾಯಾಲಯದಲ್ಲಿ ಸ್ಫೋಟ ನಡೆದಿರುವುದು ಒಂದು ವ್ಯವಸ್ಥಿತ ತಂಡದ ಕೃತ್ಯ ಎಂದು ಅಲ್ಲಿನ ಪೊಲೀಸ್ ಆಯುಕ್ತ ನಾರಾಯಣ ನಡಮನಿಯವರು ನೀಡಿದ ಹೇಳಿಕೆಯನ್ನೇ ತನಗೆ ಬೇಕಾದಂತೆ ಅರ್ಥೈಸಿಕೊಂಡ ಉದಯವಾಣಿ, ಇದು ಲಷ್ಕರ್, ಸಿಮಿ ಕೃತ್ಯ ಎಂದೇ ಆಯುಕ್ತರು ಹೇಳಿದ್ದಾರೆ ಎಂದು ಬರೆಯಿತು. ಈ ಕುರಿತು ವಿವಿಧ ಆಂಗಲ್ಲುಗಳಿಂದ ಉದಯವಾಣಿಯ ವರದಿಗಾರರು ಯೋಚಿಸಿ ಯೋಚಿಸಿ ಬರೆದ ವರದಿಗಳು ಪತ್ರಿಕೆಯ ಮುಖಪುಟದಲ್ಲೇ ದೊಡ್ಡದಾಗಿ ಪ್ರಕಟವಾದವು.
.
ವಿಜಯ ಕರ್ನಾಟಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗದೆ ಇರುವುದು ಸಾಧ್ಯವೇ ? ದೇಶಾದ್ಯಂತ ನಡೆದ ಸ್ಫೋಟಗಳಿಗೂ ಹುಬ್ಬಳ್ಳಿ ನ್ಯಾಯಾಲಯ ಸ್ಫೋಟಕ್ಕೂ ಸಾಮ್ಯತೆ ಇದೆ...ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಉಗ್ರರು ಬಂದು ವಾಸಿಸುತ್ತಿದ್ದಾರೆ...ಇದು ಭಾರೀ ದೊಡ್ಡ ಭಯೋತ್ಪಾದನಾ ದಾಳಿಯ ಎಚ್ಚರಿಕೆ...ಸಿಮಿ, ಲಷ್ಕರ್ ಉಗ್ರರ ಕೈವಾಡ...ಪೊಲೀಸರ ನಿರ್ಲಕ್ಷ...ಎಂದು ಪುಂಖಾನುಪುಂಖವಾಗಿ ‘ವರದಿ’ಗಳನ್ನ ಪ್ರಕಟಿಸಿತು ವಿಜಯ ಕರ್ನಾಟಕ.


ಆದರೆ ವಿಪರ್ಯಾಸ ನೋಡಿ. ಅದೇ ಹುಬ್ಬಳ್ಳಿ ಸ್ಫೋಟ ಮಾಡಿದ್ದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್‌ರ ಆಪ್ತ ನಾಗರಾಜ ಜಂಬಗಿ ಹಾಗು ಸೇನೆಯ ಇತರ ಕಾರ್ಯಕರ್ತರು ಎಂದು ಪೊಲೀಸರು ಅವರನ್ನು ಬಂಧಿಸಿದಾಗ ಮಾತ್ರ ಆ ಪ್ರಮುಖ ಸುದ್ದಿಗೆ ಈ ಪತ್ರಿಕೆಗಳ ಮುಖಪುಟದಲ್ಲಿ ಜಾಗವೇ ಇಲ್ಲ. ಉದಯವಾಣಿ ಈ ಸುದ್ದಿಯನ್ನು ಹತ್ತರಲ್ಲಿ ಹನ್ನೊಂದು ಎಂಬಂತೆ ಏಳನೇ ಪುಟದಲ್ಲಿ ಹಾಕಿ ಕೈತೊಳೆದುಕೊಂಡಿತು. ಸ್ಫೋಟದ ಬಗ್ಗೆ 5-6ಕಾಲಮುಗಳಲ್ಲಿ ಯಾರ್ಯಾರ ತಲೆಗೆ ಆರೋಪ ಕಟ್ಟಿ ಬರೆಯುತ್ತಿದ್ದ ವಿಜಯ ಕರ್ನಾಟಕ ಈ ಸುದ್ದಿಯನ್ನು ಎರಡೇ ಕಾಲಮ್ಮುಗಳಲ್ಲಿ ಮುಗಿಸಿತು.

ಈ ಕುರಿತ ಎರಡೂ ಪತ್ರಿಕೆಗಳ ವರದಿಗಳಲ್ಲಿ ಶ್ರೀರಾಮ ಸೇನೆಯದಾಗಲಿ, ಮುತಾಲಿಕನ ಬಗೆಯಾಗಲಿ ಉಲ್ಲೇಖವೂ ಇರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ ತಾನೇ ? ಈ ವರದಿಯನ್ನು ಸೂಕ್ತ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿದ್ದು ಮಾತ್ರವಲ್ಲದೆ ಜಂಬಗಿ ಹಾಗು ಪ್ರಮೋದ್ ಮುತಾಲಿಕ್ ನಡುವಿನ ಬಾಂಧವ್ಯದ ಕುರಿತು ಸಾಕ್ಷಿ ಸಮೇತ ಬರೆದದ್ದು ವಾರ್ತಾಭಾರತಿ ಪತ್ರಿಕೆ ಮಾತ್ರ.




Wednesday, January 19, 2011

ಹೀಗೊಂದು ಸ್ಫೋಟಕ ವರದಿ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದಾಗ 2008ರ ಮೇ 10ರಂದು ರಾತ್ರಿ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಸ್ಫೋಟ ನಡೆಯಿತು. ನಮ್ಮ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಈ ಸ್ಫೋಟಕ್ಕೆ ಸಿಮಿ ಮತ್ತು ಲಷ್ಕರೇ ತೊಯ್ಬೆದ ನಂಟನ್ನು ಕಲ್ಪಿಸಿ ನಮ್ಮ ಕನ್ನಡದ ಹೆಚ್ಚಿನ ಪತ್ರಿಕೆಗಳು ಹಲವು ದಿನಗಳ ಕಾಲ ತರಹೇವಾರಿ ವರದಿ ಗಳನ್ನು ಮುಖಪುಟದಲ್ಲೇ ಪ್ರಕಟಿಸಿ ದವು. ಉಗ್ರಗಾಮಿಗಳು ಇವರ ಕಣ್ಣೆದುರೇ ಸಂಚು ರೂಪಿಸಿ ಇವರ ಮುಂದೆ ನಿಂತೇ ಸ್ಫೋಟ ನಡೆಸಿದರೋ ಎಂದು ಓದುಗರು ಹುಬ್ಬೇರಿಸುವಷ್ಟು ವಿವರವಾಗಿ, ರಸವತ್ತಾಗಿದ್ದವು ಈ ನಮ್ಮ ಹೆಚ್ಚಿನ ದಿನಪತ್ರಿಕೆಗಳ ವರದಿ ಗಳು. ಆದರೆ ಮೇ12,2008 ರಂದು ಕನ್ನಡ ಪ್ರಭ ಪ್ರಕಟಿಸಿದ ವರದಿಗೆ ಮಾತ್ರ ಬೇರಾವ ಪತ್ರಿಕೆಯ ವರದಿಗಳೂ ಸಾಟಿಯಲ್ಲ. ಅಬ್ಬಬ್ಬಾ...ಎಂತಹ ಭಯಾನಕ ವರದಿಯದು.
ಮಲ್ಲಿಕಾರ್ಜುನ ಸಿದ್ದಣ್ಣವರ ಎಂಬ ಭೀಕರ ವರದಿಗಾರನೊಬ್ಬ ಕೂತು ಸಿದ್ದಪಡಿಸಿದ ‘‘ನಡುಮನೆಗೂ ಬಂದ ಲಷ್ಕರ್-ಎ-ತಯ್ಯಬಾ..!’’ ಎಂಬ ಶೀರ್ಷಿಕೆಯ ಈ ವರದಿಯನ್ನೊಮ್ಮೆ ಗಮನಿಸಿ. ಹುಬ್ಬಳ್ಳಿ ಕೋರ್ಟಲ್ಲಿ ನಡೆದ ಸ್ಫೋಟವನ್ನು ಪಾಕ್ ಉಗ್ರಗಾಮಿ ಸಂಘಟನೆ ಲಷ್ಕರೆ ತೊಯಿಬ ನಡೆಸಿದ್ದು ಎಂದೇ ಪ್ರಾರಂಭವಾಗುವ ಈ ವರದಿಯುದ್ದಕ್ಕೂ ಸ್ಫೋಟಕ್ಕೆ ಪಾಕಿಸ್ತಾನದಲ್ಲಿ ನಡೆದ ತರಬೇತಿ, ಇನ್ನೂ ಎಲ್ಲೆಲ್ಲಿ ಸ್ಫೋಟ ನಡೆಸಲು ಲಷ್ಕರ್ ಯೋಜನೆ ಹಾಕಿದೆ ಎಂಬ ಮಾಹಿತಿ ಜೊತೆಗೆ ಲಷ್ಕರ್ ಯಾಕಾಗಿ ಈ ಸ್ಫೋಟಗಳನ್ನು ಮಾಡುತ್ತಿದೆ ಎಂಬ ವಿವರಣೆಯನ್ನು ನೀಡಿರುವ ಮಲ್ಲಿಕಾರ್ಜುನ ಕೊನೆಗೆ ಹುಬ್ಬಳ್ಳಿ ಗಲ್ಲಿಗಲ್ಲಿಗಳಲ್ಲೂ ಉಗ್ರರು ಅವಿತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನೂ ನೀಡುತ್ತಾರೆ. ಸಾಲದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಳ್ಳುತ್ತಾರೆ. ವರದಿಯ ಧಾಟಿ ನೋಡಿದರೆ ನ್ಯಾಯಾಲಯ ಸ್ಫೋಟ ಸಂಚಿನಲ್ಲಿ ಸ್ವತ: ಮಲ್ಲಿಕಾರ್ಜುನ ಲಷ್ಕರ್ ಉಗ್ರರೊಂದಿಗೆ ಸೇರಿಕೊಂಡಿದ್ದರೇ ಎಂಬ ಸಂಶಯವೂ ಬಂದರೆ ಆಶ್ಚರ್ಯವಿಲ್ಲ.
ಸ್ಫೋಟ ನಡೆದು ಸುಮಾರು 7 ತಿಂಗಳ ಬಳಿಕ ಅಂದರೆ 2009ರ ಜನವರಿ 11ರಂದು ಪೊಲೀಸರು ಹುಬ್ಬಳ್ಳಿ ನ್ಯಾಯಾಲಯ ಸ್ಫೋಟಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಿದರು. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾ ಲಿಕ್‌ರ ಆಪ್ತ ಸಹಾಯಕ ನಾಗಿದ್ದ ನಾಗರಾಜ ಜಂಬಗಿ ಹಾಗು ಶ್ರೀ ರಾಮಸೇನೆಯ ಕಾರ್ಯ ಕರ್ತರಾಗಿದ್ದ ರಮೇಶ್ , ಬಸವರಾಜ ಹನುಮಂತ ರೂಗಿ, ಬಸವರಾಜ ಯಮುನಪ್ಪ ಡಿಗ್ಗಿ, ಲಿಂಗ ರಾಜ್ ಗುರುನಾಥ್ ಜಾಲಗಾರ್, ಮಂಜು ನಾಥ ಅಂಬಣ್ಣ, ಹಾಗೂ ದೀಪಕ್ ಪರುಶುರಾಮ್ ಬಂಧಿತ ಆರೋಪಿ ಗಳು. (ಕೊನೆಗೆ ತನ್ನ ಸಹಚರರಿಂದಲೇ ಜೈಲಿನಲ್ಲಿ ಜಂಬಗಿಯನ್ನು ಕೊಲ್ಲಿಸ ಲಾಯಿತು ಎಂದು ಆರೋಪವಿದೆ.)
ಬಂಧಿತ ಆರೋಪಿಗಳೆಲ್ಲರೂ ತಾವು ಹುಬ್ಬಳ್ಳಿ ನ್ಯಾಯಾಲಯ ಸ್ಫೋಟದಲ್ಲಿ ಮಾತ್ರವಲ್ಲದೆ 2008ರ ಸೆಪ್ಟಂಬರ್‌ನಲ್ಲಿ ಧಾರವಾಡ ವೆಂಕಟಾಪುರ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಸ್ಫೋಟ ಸಂಚು ಮೊದಲಾದ ಇತರ ಪ್ರಕರಣಗಳಲ್ಲೂ ಭಾಗಿಯಾಗಿ ರುವುದನ್ನು ವಿಚಾರಣೆಯ ವೇಳೆ ಒಪ್ಪಿಕೊಂಡಿರುವುದಾಗಿ ಉತ್ತರ ವಲಯದ ಐಜಿಪಿ ರಾಘವೇಂದ್ರ ಔರಾದ್‌ಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Monday, January 17, 2011

ಮಾಧ್ಯಮಗಳು ಪೊಲೀಸರ ಕೈಗೊಂಬೆಯಾದವೇ?

ದೇಶಾದ್ಯಂತ ನಡೆದ ಹಲವು ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ತನ್ನ ಹಾಗೂ ತನ್ನ ಸಂಗಡಿಗರ ಪಾತ್ರದ ಕುರಿತು ಸ್ವಾಮೀ ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆ ನೀಡುವ ಮೊದಲು, ಈ ಬಾಂಬ್‌ ಸ್ಫೋಟಗಳಿಗೆ ಸಂಬಂಧಿಸಿ ರಾಷ್ಟ್ರಮಟ್ಟದ ಮಾಧ್ಯಮಗಳೂ ಎಷ್ಟು ಬೇಜವಾಬ್ದಾರಿತನ ಹಾಗೂ ಪಕ್ಷಪಾತವಾಗಿ ವರದಿ ಮಾಡಿದ್ದವು ಎಂಬುದರ ಸಣ್ಣ ಝಲಕ್‌ ಇಲ್ಲಿದೆ.

ಹಾಗಾದರೆ ‘ಇಂಡಿಯಾ ಟುಡೇ’ಯಂತಹ ರಾಷ್ಟ್ರೀಯ ಮಟ್ಟದ ಪತ್ರಿಕೆಯೊಂದು ಈ ಮಂಪರು ಪರೀಕ್ಷೆಯ ಸಾಚಾತನವನ್ನು ಪರಾಂಬರಿಸದೆ, ಪೊಲೀಸರು ಹೇಳಿದ್ದನ್ನೇ ಯಾಕೆ ನಂಬಿತು? ಮಾತ್ರವಲ್ಲ ಅದನ್ನೊಂದು ದೊಡ್ಡ ಸುದ್ದಿಯಾಗಿ ಯಾಕೆ ಪ್ರಕಟಿಸಿತು?. ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಬಳಿಕ ಮೂಸಾರಾಂ ಭಾಗ್‌ನಂತಹ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಯುವಕರನ್ನು ಠಾಣೆಗೆಳೆದುಕೊಂಡು ಹೋಗಲಾ ಯಿತು. ಪೊಲೀಸರ ಈ ಮತಿಗೇಡಿತನದ ಕೃತ್ಯಕ್ಕೆ ಸುದ್ದಿ ಮಾಧ್ಯಮಗಳು ಪ್ರಕಟಿಸಿದ ವರದಿಗಳೂ ಪರೋಕ್ಷ ಕಾರಣವಾಗಿದ್ದವು. (ಮಕ್ಕಾ ಸ್ಫೋಟದ ಹಿಂದೆ: ಆಂಧ್ರದ ರಾಜಧಾನಿಯಲ್ಲಿ ಕೋಮು ಹಿಂಸೆ, ಸಂಘಟಿತ ಅಪರಾಧ ಹಾಗೂ ಜಾಗತಿಕ ಜಿಹಾದ್‌ನ ಅಡ್ಡ ಪ್ರವೇಶ’’ ಎಂಬರ್ಥದ ಶಿರೋನಾಮೆಯ ಆಂಗ್ಲ ಲೇಖನವೊಂದು ಮೇ 23, 2007ರ ಫ್ರಂಟ್‌ಲೈನ್‌ನಲ್ಲಿ ಪ್ರಕಟವಾಗಿತ್ತು).

ಇಂತಹ ವರದಿಗಳಿಂದ ಪೊಲೀಸರ ದುಂಡಾವರ್ತನೆಗಳಿಗೆ ಸಮರ್ಥನೆ ದೊರೆತಂತಾಗುತ್ತದೆ. ಅಕ್ಟೋಬರ್ 11,2007ರಲ್ಲಿ ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿ, ಅಜ್ಮೀರ್ ಶರೀಫ್ ಸ್ಫೋಟದಲ್ಲಿ ಲಷ್ಕರೆ ತಯ್ಯೆಬಾದ ಕೈವಾಡವಿದೆಯೆಂದು ತಿಳಿಸಿತು.ಲಷ್ಕರ್ ಸಂಘಟನೆಯು ಸೂಫಿ ಪಂಥವನ್ನು ಕಡುವಾಗಿ ವಿರೋಧಿಸುತ್ತಿರುವುದರಿಂದ ಆ ಪಂಥದ ಪ್ರಧಾನ ಹೆಗ್ಗುರುತುಗಳಲ್ಲೊಂದಾಗಿರುವ ಅಜ್ಮೀರ್ ದರ್ಗಾ ಶರೀಫ್‌ನ ಮೇಲೆ ಅದು ಭಯೋತ್ಪಾದಕ ದಾಳಿಯನ್ನು ನಡೆಸಿದೆಯೆಂದು ಸಚಿವಾಲಯ ತಿಳಿಸಿತ್ತು.

ಮಾರನೆಯ ದಿನವೇ ಪ್ರವೀಣ್ ಸ್ವಾಮಿ ಎಂಬ ವರದಿಗಾರ ಬರೆದ ‘‘ಜನಪ್ರಿಯ ಇಸ್ಲಾಂ ವಿರುದ್ಧ ಸಮರ’’ ಎಂಬ ಲೇಖನವೊಂದನ್ನು ‘ದಿ ಹಿಂದೂ’ ಪತ್ರಿಕೆ ಪ್ರಕಟಿಸಿತು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್‌ನ ಸೂಫಿ ಮಂದಿರದ ಮೇಲೆ ನಡೆದ ಸ್ಫೋಟಗಳು ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿರುವ ಸೂಫಿ ಇಸ್ಲಾಂ ವಿರುದ್ಧ ಕರ್ಮಠ ಮುಸ್ಲಿಂ ತೀವ್ರವಾದಿಗಳು ನಡೆಸಿದ ಆಕ್ರಮಣವೆಂದು ಲೇಖನ ಪ್ರತಿಪಾದಿಸಿತ್ತು. ಆದರೆ ಈ ಎರಡೂ ಲೇಖನಗಳ ಪೊಳ್ಳುತನ ಈಗ ಬಯಲಾಗಿದೆ.ಇಲ್ಲಿ ನಿಜವಾಗಿಯೂ ನಡೆದಿರುವುದು ಭಾರತದ ಧಾರ್ಮಿಕ ಸಾಮರಸ್ಯದ ವಿರುದ್ಧ ಉಗ್ರ ಹಿಂದುತ್ವವಾದಿಗಳ ದಾಳಿಯಾಗಿದೆ. ಅಜ್ಮೀರ್ ಶರೀಫ್ ದರ್ಗಾಕ್ಕೆ ಹಿಂದೂಗಳು ಕೂಡಾ ಶ್ರದ್ಧಾಭಕ್ತಿಯಿಂದ ಭೇಟಿ ನೀಡುತ್ತಿರುವುದು ಕೇಸರಿ ಉಗ್ರರ ಹೊಟ್ಟೆಯುರಿಸಿದೆ. ‘‘ಅಜ್ಮೀರ್‌ನಲ್ಲಿ ಬಾಂಬ್ ಸ್ಫೋಟಿಸಿದಲ್ಲಿ ಅಲ್ಲಿಗೆ ಹಿಂದುಗಳು ಭೇಟಿ ನೀಡಲು ಹಿಂಜರಿಯುವರು ಎಂಬ ತರ್ಕ ನಮ್ಮದಾಗಿತ್ತು’’ ಎಂದು ಆಸೀಮಾನಂದ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.

ತೀರಾ ಇತ್ತೀಚೆಗೆ, ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಮಾಧ್ಯಮಗಳು ಪುಂಖಾನುಪುಂಖ ಲೇಖನ ಮಾಲೆಗಳನ್ನು ಹರಿಸಿದವು. ಬೇಹುಗಾರಿಕಾ ಸಂಸ್ಥೆಗಳ ಮಾಹಿತಿಯನ್ನಾಧರಿಸಿದ ಈ ಲೇಖನಗಳಲ್ಲಿ ಸ್ಫೋಟ ನಡೆಸಿದ ಇಂಡಿಯನ್ ಮುಜಾಹಿದೀನ್ ಉಗ್ರರು, ದೇಶದಿಂದ ಪರಾರಿಯಾಗಿದ್ದು ವಿದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಆದರೆ ಅವರ ಸಹಚರರು ಆಝಂಘರ್ ಹಾಗೂ ಭಟ್ಕಳ ಮತ್ತಿತರ ನಗರಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂದು  ಈ ಮಾಧ್ಯಮಗಳು ಸುಳಿವು ಕೂಡಾ ನೀಡಿದ್ದವು!. 
                                                                                                                    -ಮನೀಷಾ  ಸೇಠಿ

Thursday, January 13, 2011

‘ಉದಯವಾಣಿ’ಯ ಭಯೋತ್ಪಾದಕ ವರದಿ

ತನ್ನ ವರದಿಗಳ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚುವುದೇ ಪತ್ರಿಕೆಯೊಂದರ ಧ್ಯೇಯವಾಗಿಬಿಟ್ಟರೆ ಅದು ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಇಲ್ಲಿದೆ. 2009ರ ಜನವರಿ 14ರಂದು ಉದಯವಾಣಿ ಎಂಬ ದಿನಪತ್ರಿಕೆ ತನ್ನ ಮುಖಪುಟದಲ್ಲಿ ದೊಡ್ಡದಾಗಿ ಒಂದು ವರದಿಯನ್ನು ಪ್ರಕಟಿಸಿತು. ‘ಶಬರಿಮಲೈಯಲ್ಲಿ ಉಗ್ರರು’ ಎಂಬ ಶಿರೋನಾಮೆಯೊಂದಿಗೆ ಪ್ರಕಟವಾದ ಈ ವರದಿಯಲ್ಲಿ ಬಂಟ್ವಾಳದಿಂದ ಹೋಗಿದ್ದ ಭಕ್ತರ ತಂಡವೊಂದು ಶಬರಿಮಲೆಯಲ್ಲಿ ಉಗ್ರರು ನುಸುಳಿದ್ದನ್ನು ಹಾಗು ಅವರನ್ನು ಬಂಧಿಸಿದ್ದನ್ನು ಕಣ್ಣಾರೆ ನೋಡಿದೆ ಎಂದು ಹೇಳಲಾಗಿತ್ತು. 

ಸಾಲದ್ದಕ್ಕೆ ಉಗ್ರರು ಧರಿಸಿದ್ದ ಉಡುಪು, ಶೂಗಳ ವಿವರದಿಂದ ಪ್ರಾರಂಭಿಸಿ ಅವರ ಸಂಖ್ಯೆ, ಅವರಲ್ಲಿದ್ದ ಸ್ಫೋಟಕಗಳ ವಿವರ ಹಾಗೂ ಅವರನ್ನು ಬಂಧಿಸಿದ ರೀತಿಯನ್ನು ಕೂಡ ಆ ವರದಿಯಲ್ಲಿ ವಿವರವಾಗಿ ತಿಳಿಸಲಾಗಿತ್ತು.  ಉದಯವಾಣಿಯಲ್ಲಿ ಮಾತ್ರ ಪ್ರಕಟವಾಗಿದ್ದ ಈ ಭಯಾನಕ ವರದಿಯು ಸಹಜವಾಗಿ ಕರಾವಳಿ ಕರ್ನಾಟಕದಾದ್ಯಂತ ಭಾರೀ ಆತಂಕ ಸೃಷ್ಟಿಸಿತು. ಈ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ಶಬರಿಮಲೆಗೆ ಹೊರಟಿದ್ದ ಭಕ್ತರು ಮತ್ತವರ ಕುಟುಂಬಸ್ಥರು ಕಂಗಾಲಾದರು. ತಲೆಗೊಂದರಂತೆ ಗಾಳಿಸುದ್ದಿಗಳು, ವದಂತಿಗಳು ಹುಟ್ಟಿಕೊಂಡವು.

ಆದರೆ ನಿಜವಾಗಿ ಶಬರಿಮಲೆಯಲ್ಲಿ ಅಂತಹ ಯಾವ ಘಟನೆಯೂ ನಡೆದೇ ಇರಲಿಲ್ಲ. ಈ ಕುರಿತು ಸಮಗ್ರ ವಿವರ ಸಂಗ್ರಹಿಸಿದ ‘ವಾರ್ತಾಭಾರತಿ’ ಎಂಬ ಇನ್ನೊಂದು ದಿನಪತ್ರಿಕೆಯು ಮರುದಿನ ಅಂದರೆ ಜನವರಿ 15ರಂದು ಸತ್ಯವೇನೆಂಬುದನ್ನು ಜನತೆಗೆ ತಿಳಿಸಿತು. ‘ವಾರ್ತಾಭಾರತಿ’ಯು ಜನರಲ್ಲಿದ್ದ ಆತಂಕವನ್ನು ದೂರ ಮಾಡಿ ಸಮಾಧಾನದ ನಿಟ್ಟುಸಿರುವ ಬಿಡುವಂತೆ ಮಾಡಿತು. 
‘ವಾರ್ತಾಭಾರತಿ’ಯು ಕೇರಳದ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿತ್ತು. 
ಅದು ಶಬರಿ ಮಲೆಯ ಉಸ್ತುವಾರಿ ಡಿವೈಎಸ್ಪಿಯಿಂದ ಕೇರಳದ ಡಿಜಿಪಿವರೆಗಿನ ಎಲ್ಲ ಪೊಲೀಸ್ ಅಧಿಕಾರಿಗಳೊಡನೆ ಸ್ಪಷ್ಟೀಕರಣ ಕೇಳಿದಾಗ ಅವರೆಲ್ಲರೂ ಉದಯವಾಣಿಯ ಭಯೋತ್ಪಾದಕ ವರದಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ‘‘ಅಂತಹ ಯಾವ ಘಟನೆಯೇ ನಡೆದಿಲ್ಲ. ಮತ್ತು ಯಾರ ಬಂಧನವೂ ಆಗಿಲ್ಲ’’ ಎಂದು ಖಚಿತಪಡಿಸಿದರು. ಈ ರೀತಿ ಸಮಾಜದ ಶಾಂತಿ , ಸುವ್ಯವಸ್ಥೆಗೆ ಕೊಳ್ಳಿ ಇಡುವ ಉದಯವಾಣಿಯ ಈ ಭಯಾನಕ ಪ್ರಯತ್ನ ವಿಫಲವಾಯಿತು. ಉಡುಪಿಯ ಕೋಮು ಸೌಹಾರ್ದ ವೇದಿಕೆಯ ಶ್ರೀರಾಮ ದಿವಾಣ ಎಂಬವರು ಉದಯವಾಣಿಯ ವಿರುದ್ಧ ಪ್ರೆಸ್ ಕೌನ್ಸಿಲ್‌ಗೆ ದೂರು ನೀಡಿದ್ದು ಪ್ರೆಸ್ ಕೌನ್ಸಿಲ್ ಉದಯವಾಣಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.